ಗುರುವಾರ, ಜೂನ್ 18, 2015

ಬಿರುಗಾಳಿ



ದೊಂದು ಸಂಜೆ ಬೈಕ್ ಸ್ಟಾರ್ಟ್ ಮಾಡಿದವನೇ ನೇರವಾಗಿ ಬೀಚ್ ಬಳಿಗೆ ಹೋದೆ. ಪಾರ್ಕಿಂಗ್ ಲಾಟ್ ನಲ್ಲಿ ಬೈಕ್ ಇಟ್ಟು ಮರಳಿನ ರಾಶಿಯಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತಾ ನಡೆಯತೊಡಗಿದೆ. ಎಲ್ಲಿ ಯವರೆಗೆ ! ಯೋಚಿಸಿಯೇ ಇರಲಿಲ್ಲ.
ಬದುಕಿನಲ್ಲಿ ಬೀಸುತ್ತಿದ್ದ ಬಿರುಗಾಳಿ ಎಲ್ಲವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಮನಸ್ಸು ಯಾವ ಪ್ರಶ್ನೇಗಳಿಗೂ ಉತ್ತರ ಹುಡುಕಲಾರದೇ ತೊಳಲಾಡುತ್ತಿತ್ತು. ಈ ಹಿಂದೆ ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದ ಅಲೆಗಳ ಶಬ್ದ ಇಂದೇಕೋ  ನಿರ್ಭಾವುಕವಾಗಿದ್ದವು. ನಡೆದು ನಡೆದು ಸುಸ್ತಾಗಿ ಅಲ್ಲೇ ಮರಳಲ್ಲಿ ಮಂಡಿಯೂರಿ ಕಣ್ಣುಮುಚ್ಚಿ ಕುಳಿತುಕೊಂಡೆ.
ಗಾಳಿಯ ರುಯ್...  ರುಯ್... ಶಬ್ದ ನನ್ನ ಬದುಕಲ್ಲಿ ಬೀಸಿದ ಬಿರುಗಾಳಿಯನ್ನು ಮತ್ತೆ ಮತ್ತೆ ನೆನಪಿಸುತ್ತಿತ್ತು...
ಹೌದು...ಅತ್ಯಂತ ಸುಖಿ ಜೀವಿ ಅಂದನೇ ನಾನೇ ಅಂತ ಖುಷಿಯಿಂದ ಹೇಳಿಕೊಳ್ಳುವಷ್ಟು ಚಂದದ ಬದುಕು ನನ್ನದಾಗಿತ್ತು. ಅಪ್ಪ ಅಮ್ಮ ಮತ್ತು ನನ್ನನ್ನು ತುಂಬಾ ನೆಚ್ಚಿಕೊಂಡಿದ್ದ ನನ್ನ ಇಬ್ಬರು ಪೋಕಿರಿ ಅಣ್ಣಂದಿರು ಹಾಗೂ ಬಾಲ್ಯದಿಂದಲೇ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ ನನ್ನ ಪ್ರೀತಿಯ ತರಲೆ ಭುವಿ. ಅಪ್ಪ ನಿವೃತ್ತ ಮಾಸ್ಟರ್, ಅಮ್ಮ ಹೌಸ್ ವೈಫ್ ಅಂದರೆ ರಿಯಲ್ ಹೋಮ್ ಮಿನಿಸ್ಟರ್ ಮತ್ತು ಫೈನಾನ್ಸ್ ಮಿನಿಸ್ಟರ್ ಕೂಡಾ.! ಅಣ್ಣಂದಿರಿಬ್ಬರು ಬೆಂಗಳೂರಿನಲ್ಲಿ ಡಾಕ್ಟರ್ಸ್, ಭುವಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ನಾನು ಚೆನ್ನೈನಲ್ಲಿ ಐಟಿ ಉದ್ಯೋಗಿ. ಏನ್ ಮಾಡೊಕಾಗತ್ತೆ ಹೇಳಿ. ಕ್ಯಾಂಪಸ್ ಸೆಲೆಕ್ಷನ್ನಲ್ಲಿ ನನ್ನ ದೌರ್ಭಾಗ್ಯಕ್ಕೆ ಚೈನೈನಲ್ಲಿ ಸಿಕ್ಕಿತು ಅವಳಿಗೆ ಬೆಂಗಳೂರಿನಲ್ಲಿ. ಕಂಪನಿ ಒಂದಾಗಿದ್ದರೂ ಒಂದೇ ಸ್ಥಳದಲ್ಲಿ ಇರಲು ಬಿಡಬೇಕಲ್ಲ ಪಾಪಿಗಳು. ಆದರೂ ಈ ಮೊಬೈಲ್ ಮತ್ತು ಇಂಟರ್ನೆಟ್ ಇದ್ದುದರಿಂದ ನಮ್ಮಿಬ್ಬರ ನಂಟು ಮಧುರವಾಗಿಯೇ ಇತ್ತು. ಒಂದರ್ಥದಲ್ಲಿ ಜಾಲಿ ಜೀವನ.
ಒಂದು ದಿನ ಬೆಳಗ್ಗೆ ಅಮ್ಮ ಪೋನ್ ಮಾಡಿ ಲೋ... ಇವತ್ತು ಅಣ್ಣನಿಗೆ   ಹುಡುಗಿ ನೋಡೊಕೆ ಹೋಗ್ತಿದಿವಿ ನೀನೊಬ್ಬ ಮಿಸ್ ಆದಿ ನೋಡು ಅಂದ್ಲು. ಹೌದಮ್ಮ ಏನ್ ಮಾಡ್ಲಿ ಕರ್ಮದ್ದು ರಜೆ ಸಿಗ್ತಿಲ್ಲ ನೀವ್ ಹೋಗಿ ಬನ್ನಿ... ಆ ತರ್ಲೆಗೆ ಬೆಸ್ಟ್ಆಫ್ ಲಕ್ ಅಂತ ಹೇಳು ಅಂತ ಹೇಳಿ ಪೋನ್ ಇಟ್ಟೆ. ಹೌದು ಅವತ್ತು ನನ್ನ ದೊಡ್ಡಣ್ಣ ಸುಕೇಶನಿಗೆ ಹುಡುಗಿ ನೋಡಲು ಹೋಗೋ ಕಾರ್ಯಕ್ರಮ. ನಾನಂತು ತುಂಬಾ ಖುಷಿಯಾಗಿದ್ದೆ.
ಈ ಖುಷಿಯಲ್ಲೇ ಬೇಗ ಬೇಗನೆ ಆಫೀಸ್ ತಲುಪಿ ಎಲ್ಲರಿಗೂ ಗುಡ್ ಮಾರ್ನಿಂಗ್  ಹೇಳಿ ಕೆಲಸ ಪ್ರಾರಂಭಿಸಬೇಕು ಅನ್ನೊ  ಅಷ್ಟರಲ್ಲಿ ಒಂದು ಅನ್ನೋನ್ ನಂಬರ್ ನಿಂದ ಪೋನ್ ಬಂತು. ಹಲೋ...ಅಂದೊಡನೆ ಆಚೆಕಡೆಯಿಂದ ನಾನು ಅಂಗಡಿ ರವಿ... ನಿಮ್ಮ ಮನೆಯವರಿಗೆ ಆಕ್ಸಿಡೆಂಟ್ ಆಗಿದೇ ನೀವ್ ಬೇಗ ಹೊರಟು ಬನ್ನಿ ಅಂತ ಗಾಬರಿಯ ಧ್ವನಿ ಕೇಳಿಸಿತು. ನನಗೆ ಮೈಯೆಲ್ಲಾ ಬೆವರತೊಡಗಿತು. ಕೂಡಲೇ ಅಣ್ಣ, ಅಪ್ಪ ಅಮ್ಮ, ಎಲ್ಲರಿಗೂ ಕಾಲ್ ಮಾಡಿದೆ. ಯಾರಿಗೂ ಕಾಲ್ ಸಿಗ್ತಾ  ಇರ್ಲಿಲ್ಲ. ತಕ್ಷಣ ಫ್ಲೈಟ್ ನಲ್ಲಿ  ಮನೆಗೆ ಹೊರಟೆ. ದಾರಿಯುದ್ದಕ್ಕೂ ಗಂಟೆ ನೋಡುವುದೇ ಕೆಲಸವಾಗಿತ್ತು.
ಮನೆಗೆ ತಲುಪುವಷ್ಟರಲ್ಲಿ ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಭುವಿಯ ಅಪ್ಪ ಶಂಕರ್ ಮಾವ, ಊರವರೆಲ್ಲಾ ಮನೆ ಮುಂದೆ ಜಮಾಯಿಸಿದ್ರು. ಅವರನ್ನೆಲ್ಲಾ ನೋಡಿ ಹೃದಯ ನನಗೇ ಕೇಳಿಸುವಷ್ಟು ಜೋರಾಗಿ ಬಡಿಯ ತೊಡಗಿತ್ತು. ತಕ್ಷಣ ಒಳಗಿನ ಅಂಗಳದ ವರೆಗೆ ಹೋಗಿ ನೋಡಿದರೆ ಮಲಗಿರುವ ನಾಲ್ಕು ಜನರ ಮುಂದೆ ತೆಂಗಿನ ಕಾಯಿಯಲ್ಲಿ ಇಟ್ಟ ದೀಪಗಳು ಪ್ರಜ್ವಲಿಸುತ್ತಿದ್ದವು. ಆ ದೃಶ್ಯವನ್ನು ಕಣ್ಣುಗಳು ನಂಬುವುದಕ್ಕೆ ಸಿದ್ಧವಿರಲಿಲ್ಲ. ಗರಬಡಿದವನಂತೆ ನಿಂತುಕೊಂಡೆ. ಗಂಟಲು ಸಂಪೂರ್ಣವಾಗಿ ಒಣಗಿತ್ತು, ಮಾತೇ ಬರುತ್ತಿರಲಿಲ್ಲ. ಭೂಮಿ ಎಲ್ಲಾ ಸುತ್ತುತ್ತಿರುವ ಅನುಭವ. ಅದೇನೋ ಕಣ್ಣುಗಳಲ್ಲಿ ಒಂದು ಹನಿ ನೀರು ಕೂಡ ಬರಲಿಲ್ಲ. ಶಂಕರ್ ಮಾವ ಸ್ವಲ್ಪ ಸಮಾಧಾನಿಸಿದ ಬಳಿಕವೇ ವಾಸ್ತವತೆಗೆ ಮರಳಿದ್ದು. ಅವರ ಭುಜದ ಮೇಲೆ ಹಣೆಯನ್ನಿಟ್ಟು ಎಷ್ಟು ಅತ್ತಿದ್ದೇನೋ ಗೊತ್ತಿಲ್ಲ. ಒಂದೇ ದಿನದಲ್ಲಿ ಅವರೆಲ್ಲರ ಚಿತೆಯೊಡನೆ ಮನೆಯ ಸಂತೋಷವೆಲ್ಲಾ ಭಸ್ಮವಾಗಿತ್ತು ಮನೆಯೆಲ್ಲಾ ಭೂತ ಬಂಗಲೆಯಂತೆ ಬಿಕೋ ಎನ್ನುತ್ತಿತ್ತು. ಅಂದು ಸಂಜೆ ಶಂಕರ್ ಮಾವ ನನ್ನ ಹತ್ತಿರ ಕೂತು ನೋಡಪ್ಪಾ.. ಯಾರೋ ನಮ್ಮ ಮನೆಗೆ ಬತರ್ಾರೆ ನಾನು ಹೋಗಬೇಕಿದೆ. ಆದರೆ ನೀನು ಹೆದರಬೇಡ ನಾನಿದ್ದೇನೆ ನೀ ಧೈರ್ಯವಾಗಿರು ಎಂದರು. ಸರಿ ಎಂದು ತಲೆಯಾಡಿಸಿದೆ. ಅವರು ಮೆಟ್ಟಿಲಿಳಿದು ಹೊರ ನಡೆಯುತ್ತಿದ್ದಂತೆ. ಮಾವ ಎಂದೆ...ಅವರು ಕಣ್ಸನ್ನೆಯಲ್ಲೇ ಏನು ಅಂತ ಕೇಲಿದರು.. ದಯವಿಟ್ಟು ಭುವಿಯನ್ನು ಬರಲು ಹೇಳಿ ನನಗೆ ಅವಳ ಅಗತ್ಯವಿದೆ ಅಂತ ಬೇಡಿಕೊಂಡೆ. ಅವರು ಸರಿನಪ್ಪ ನಾಳೆ ಬರ್ತಾಳೆ ಅಂತ ಹೇಳಿ ಹೊರಟು ಹೋದ್ರು. ಇನ್ನು ನಮ್ಮ ಚಿಕ್ಕಪ್ಪ ಅವರಂತೂ ರಜೆ ಇಲ್ಲ ಅಂತ ಅಂದೇ ಹೊರಟರು. ಉಳಿದವನು ನಾನು ಮಾತ್ರ. ದಿನ ಮೂರು ಕಳೆದರೂ ಭುವಿ ಬರಲೇ ಇಲ್ಲ. ಮಾವ ಕೂಡಾ ಬರಲೇ ಇಲ್ಲ. ಫೋನ್ ಸ್ವಿಚ್ ಆಫ್. ಆ ಮನೆಯಲ್ಲಿ ಒಂಟಿಯಾಗಿ ದಿನ ಕಳೆಯುವುದು ಬಹಳ ಕಷ್ಟವಾಗತೊಡಗಿತ್ತು. ಎಲ್ಲೆಲ್ಲೂ ನೀರವ ಮೌನ... ಕೆಲವೊಮ್ಮೆ ಅಮ್ಮ ಅಡುಗೆ ಮನೆಯಿಂದ ಕರೆದಂತಾಗುವುದು...ಅಣ್ಣ ಮಾತನಾಡಿದಂತಾಗುವುದು. ಒಟ್ಟಿನಲ್ಲಿ ಮನಸ್ಸಿಗೆ ತುಕ್ಕು ಹಿಡಿದಿತ್ತು. ಅತ್ತ ನನ್ನ ಕಂಪನಿ ಕಡೆಯಿಂದ ಹೆಚ್ಆರ್ ಮ್ಯಾನೇಜರ್ ಕರೆ ಮಾಡಿ ನಾಳೆ ಕೆಲಸಕ್ಕೆ ಬಾ...ಇಲ್ಲಾ ಅಂದ್ರ ಮತ್ಯಾವತ್ತೂ ಬರಬೇಡಾ ಅಂತ ಖಡಕ್ ಆಗಿ ಹೇಳಿಬಿಟ್ಟರು. ನಾನಂತೂ ಬರಲ್ಲ ಸರ್. ಅಂತ ಹೇಳಿ ಕಾಲ್ ಕಟ್ ಮಾಡಿದೆ. ಊಟ ಮಾಡದೇ ವಾರವೇ ಕಳೆದಿತ್ತು ಇನ್ನು ಕೆಲಸ ಮಾಡುವುದೆಲ್ಲಿ ಬಂತು. ಇತ್ತೀಚಿಗಂತು ಭುವಿಯ ಮೆಸೆಜ್, ಕಾಲ್ ಯಾವುದೂ ಇಲ್ಲದೇ ಅವಳ ನೆನಪು ಮತ್ತಷ್ಟು ಕಾಡುತ್ತಿತ್ತು. ಮನಸ್ಸಿನ ದುಃಖವನ್ನು ಹೇಳಿಕೊಳ್ಳೋಣವೆಂದರೆ ಅಮ್ಮ ಇಲ್ಲ..ಅಪ್ಪ ಇಲ್ಲ..ಕೊನೆಯದಾಗಿ ಅಣ್ಣಂದಿರೂ ಇಲ್ಲ. ಉಳಿದದ್ದು ಭುವಿ ಮಾತ್ರ. ಅವಳು ಯಾಕೆ ಹೀಗೆ ಮಾಡುತ್ತಿದ್ದಾಳೆ ಅಂತನೇ ತಿಳಿಯಲಿಲ್ಲ. ಪ್ರತೀ ಕಷ್ಟ ಸುಖದಲ್ಲೂ ನನ್ನೊಡನೆ ಜತೆಯಾಗಿರುತ್ತಿದ್ದ ಅವಳು ಇಂತಹ ದುರ್ಘಟನೆ ನಡೆದಾಗಲೂ ಈ ರೀತಿ ಯಾಕೆ ಮೌನವಾಗಿದ್ದಾಳೆ ಅಂತಾನೇ ತಿಳಿಯಲಿಲ್ಲ. ಯಾಕೋ ಆತಂಕ ಶುರುವಾಗಿಬಿಟ್ಟಿತ್ತು...ಅದೇ ಚಿಂತೆ ಪ್ರತೀ ಕ್ಷಣ ಕಾಡತೊಡಗಿತು.
ಹೀಗಿರಬಹುದು...ಹಾಗಿರಬಹುದು ಅಂತ ಮನಸ್ಸು ಕಥೆ ಹೆಣೆಯಲು ಪ್ರಾರಂಭಿಸಿತ್ತು. ಅಪ್ಪ, ಅಮ್ಮ, ಅಣ್ಣಂದಿರು ಯಾರೂ ಮರಳಿ ಬರುವುದಿಲ್ಲ ಎಂಬ ವಾಸ್ತವ ನಿಧಾನವಾಗಿ ಅರಿವಾಗತೊಡಗಿತ್ತು. ಆದರೆ ನನ್ನ ಪ್ರೀತಿಯ ಭುವಿ...! ಮತ್ತೆ ಮನಸ್ಸು ಹುಚ್ಚನಂತೆ ವತರ್ಿಸತೊಡಗಿತ್ತು. ನಮ್ಮ ನಂದಗೋಕುಲದಂತಹ ಮನೆ ಸ್ಮಶಾನವಾಗಿ ಅವತ್ತಿಗೆ 15 ದಿನಗಳಾಗಿತ್ತು. ಅದೇಕೋ ಇನ್ನೂ ಇಲ್ಲೇ ಕೂತರೆ ಹುಚ್ಚನಾಗುತ್ತೇನೆಂಬ ಭಯ ಕಾಡತೊಡಗಿತು. ಕೂಡಲೇ ಭುವಿಯ ಮನೆ ಕಡೆಗೆ ಹೊರಟೆ. 15 ದಿನಗಳ ಬಳಿಕ ಮನೆಯಿಂದ ಹೊರ ಬಂದದ್ದರಿಂದಲೂ ಏನೋ..ಹೊರ ಜಗತ್ತೆಲ್ಲಾ ವಿಚಿತ್ರವಾಗಿ ಕಾಣತೊಡಗಿತ್ತು. ಬೈಕ್ ನ ಸೈಡ್ ಮಿರರ್ ನಲ್ಲಿ ಮುಖ ನೋಡಿದರೆ ದಟ್ಟವಾದ ಗಡ್ಡ ಬೆಳೆದು ನನಗೇ ಗುರುತು ಸಿಗದಂತಾಗಿತ್ತು. ಅತ್ತು ಅತ್ತು ಕಣ್ಣುಗಳು ಸಣ್ಣದಾಗಿದ್ದವು.
ಭುವಿಯ ಮನೆಗೆ ತಲುಪುತ್ತಿದ್ದಂತೆ ದೂರದಲ್ಲಿ ಬರುತ್ತಿದ್ದ ನನ್ನನ್ನು ನೋಡಿ ಶಂಕರ ಮಾವ...ಗೇಟ್ ವರೆಗೂ ಬಂದು ನಿಂತಿದ್ದರು. ಗೇಟ್ ಬಳಿ ಬೈಕ್ ನಿಲ್ಲಿಸಿ ಅವರನ್ನು ಮಾತನಾಡಿಸಲು ಮುಂದಾದೆ. ಆದರೆ ಅವರು ಬಾ ಎಂಬ ಸಂಜ್ಞೆ ಮಾಡುತ್ತಾ... ಮೌನವಾಗಿಯೇ ಮನೆ ಒಳಗೆ ನಡೆದರು. ನಾನು ಅವರನ್ನು ಹಿಂಬಾಲಿಸಿದೆ. ಮನೆ ಒಳಗೆ ಹೋದವನು ಸೋಫಾದ ಮೇಲೆ ಕುಳಿತುಕೊಂಡು ಅತ್ತಿತ್ತ ಕಣ್ಣು ಹಾಯಿಸಿದೆ. ಅಷ್ಟರಲ್ಲಿ ಮಾವ ಮೌನ ಮುರಿದು ಭುವಿಯನ್ನು ಹುಡುಕುತ್ತಿದ್ದೀಯಾ ಅಂತ ಕೇಳದರು. ನಾನು ಬೇಸರದಿಂದಲೇ ಹೂಂ ಅಂದೆ.
ಅವರು ದೀರ್ಘವಾದ ಉಸಿರು ತೆಗೆಯುತ್ತಾ...ಮುಂದುಗಡೆ ಇದ್ದ ರೂಮಿನ ಬಾಗಿಲು ತೆಗೆದರು.
ನೋಡು ನಿನ್ನ ಭುವಿಯನ್ನು ಅಂದರು... ಅವಳತ್ತ ನೋಡುತ್ತಲೇ ಭಾವನೆಗಳೆಲ್ಲವೂ ಸ್ಥಿಮಿತಕಳೆದುಕೊಂಡಿದ್ದವು. ದುಃಖ ಉಮ್ಮಳಿಸಿ ಬರುತ್ತಿತ್ತು...ಅಂದು ನಮ್ಮ ಮನೆಯವರೆಲ್ಲರೂ  ಆಕ್ಸಿಡೆಂಟ್ ನಲ್ಲಿ ಸತ್ತಿದ್ದಾರೆ ಅಂತ ತಿಳಿದು ಒಬ್ಬಂಟಿಯಾದ ನನ್ನನ್ನು ಸಂತೈಸುವುದಕ್ಕಾಗಿ ಬೆಂಗಳೂರಿನಿಂದ ಹೊರಟವಟಳಿಗೆ ಬಸ್ ಆಕ್ಸಿಡೆಂಟ್ ಆಗಿ ಪ್ಯಾರಾಲಿಸಿಸ್ ಆಗಿದೆ ಬದುಕಿ ಉಳಿದದ್ದೇ ಹೆಚ್ಚು ಅಂತ ಶಾಂತ ಅತ್ತೆ ಎಲ್ಲವನ್ನು ವಿವರಿಸಿದರು. ಅವಳ ದೇಹದ ಅರ್ಧ ಭಾಗವಂತೂ ಸಂಪೂರ್ಣವಾಗಿ ನಿಷ್ಕ್ರೀಯವಾಗಿತ್ತು. ಭುವಿ ಅಂತೂ ನನ್ನನ್ನು ನೋಡಿ ಎದ್ದು ಬರುವುದಕ್ಕೆ ಪ್ರಯತ್ನಿಸುತ್ತಿದ್ದಳು. ನೇರವಾಗಿ ಅವಳ ಬಳಿ ಹೋಗಿ ಗಟ್ಟಿಯಾಗಿ ತಬ್ಬಿಕೊಂಡೆ. ಲೇ.. ನಾನಿದ್ದೇನೆ ಕಣೆ ತರಲೆ..ನಿನಗೇನೂ ಆಗಲ್ಲ. ಈಗಾಗಲೇ ಎಲ್ಲವನ್ನು ಕಳೆದುಕೊಂಡಿದ್ದೇನೆ. ನನಗಿರುವ ಒಂದೇ ಒಂದು ಭರವಸೆ ಅಂದ್ರೆ ನೀನು. ಒಳ್ಳೆ ಡಾಕ್ಟರ್ ಬಳಿ ಹೋಗೋಣ ಎಲ್ಲವೂ ಸರಿ ಆಗುತ್ತೆ ಅಂತ ಸಮಾಧಾನಿಸಿದೆ. ಅವಳಲ್ಲಿ ಮಾತನಾಡಿದೊಡನೆ ಇಷ್ಟು ದಿನ ಕಾಡುತ್ತಿದ್ದ ಅಮ್ಮನ ನೆನಪು, ಏಕಾಂತ ಎಲ್ಲರೂ ಅರೆಕ್ಷಣ ಪರದೆಯ ಹಿಂದೆ ಸರಿದಿತ್ತು.
ಅಂದಿನಿಂದ ಭುವಿಯ ಆರೈಕೆಯೇ ನನ್ನ ಬದುಕಾಗಿಬಿಟ್ಟಿತ್ತು. 8 ವರ್ಷಗಳ ಕಾಲ ಅದೇಷ್ಟೋ ಪ್ರಖ್ಯಾತ ವೈದ್ಯರು ಬಂದರೂ ಏನೂ ಪ್ರಯೋಜನವಾಗಲಿಲ್ಲ... ಭುವಿ ಚೇತರಿಸಿಕೊಳ್ಳಲೇ ಇಲ್ಲ...  ಅದೊಂದು ದಿನ ಎಂದಿನಂತೆ ಅವಳಿಗೆ ಊಟ ಮಾಡಿಸಿ.. ಹಣೆಗೆ ಮುತ್ತಿಡುತ್ತಾ ಭರವಸೆಯ ಮಾತುಗಳನ್ನಾಡುತ್ತಾ ಮಲಗಿಸಿ ಇನ್ನೇನು ಎದ್ದು ಹೊರನಡೆಯಬೇಕೆನ್ನುವಷ್ಟರಲ್ಲಿ ನೀ ಎಲ್ಲೂ ಹೋಗಬೇಡ ಕಣೋ... ಇಲ್ಲೇ ಹತ್ತಿರ ಕುಳಿತುಕೊ ಎಂದು ಭುವಿ ಗೊದ್ದೆ ಸ್ವರದಲ್ಲಿ ಹೇಳಿದಳು. ಅಯ್ತು ಕಣೆ... ಅಂತ ಅವಳ ತಲೆ ಸವರುತ್ತಾ ಅಲ್ಲೇ ಕುಳಿತೆ. ಅವಳು ನನ್ನನ್ನು ಬಿಟ್ಟು ಹೋಗಬೇಡಾ ಕಣೋ ಅಂತ ಹೇಳುತ್ತಲೇ..ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನನಗೆ ಕುಳಿತಲ್ಲಿಗೇ ನಿದ್ದೆ ಬಂದದ್ದು ಗೊತ್ತೇ ಆಗಲಿಲ್ಲ. ಒಂದರ್ಧ ಗಂಟೆ ಕಳೆದಿರಬಹುದು ಒಮ್ಮೆಲೆ ಎಚ್ಚರವಾಯಿತು. ಭುವಿ ಮಾತ್ರ ಹಾಗೆಯೇ ಮಲಗಿದ್ದಳು. ಆದರೆ  ಅವಳ ಕೈಗಳೆಲ್ಲಾ ತಂಪಾಗಿದ್ದವೂ...

ಅಂದಿಗೆ ನನ್ನ ಜೀವನದ ಕೊನೇ ಭರವಸೆಯೂ ಕಮರಿಹೋಗಿತ್ತು...


ಅಷ್ಟರಲ್ಲಿ ಯಾರೋ ಕರೆದಂತಾಯಿತು. ಹೋ ಬೀಚ್ ನಲ್ಲಿ ಇದ್ದೇನಲ್ಲಾ... ಛೇ.. ಇನ್ನೇನು ಸೂರ್ಯ ಮುಳುಗುವ ಹೊತ್ತಾಯ್ತು...ಮಾವನಿಗೆ ಮಾತ್ರೆ ಕೊಡಬೇಕಿದೆ ಅಂತ ನೆನಪಾಗಿ ಭಾರವಾದ ಮನಸ್ಸಿನಿಂದಲೇ ಬೈಕ್ ಹತ್ತಿದೆ.

                                                                                                                                          ಇಂತಿ,
ಕೆ.ನಾ.ಗೋರೆ 

 

   

1 ಕಾಮೆಂಟ್‌: