ಗೋರೆ ಬರಹ
ಮನದ ಮಾತುಗಳು, ತೋಚಿದ್ದನ್ನು ಗೀಚಿದಾಗ ಮೂಡಿದ ಲೇಖನಗಳು, ಪುಟ್ಟ ಕವನಗಳು, ಕ್ಲಿಕ್ಕಿಸಿದ ಭಾವಚಿತ್ರಗಳು...
ಬುಧವಾರ, ಮಾರ್ಚ್ 8, 2017
ಸೋಮವಾರ, ಮಾರ್ಚ್ 6, 2017
ಶನಿವಾರ, ಜನವರಿ 28, 2017
ಬೈಕ್ ಸವಾರರ ಕನಸು: ಲೆಹ್-ಲಡಾಕ್
ನನಸಾದ ಆ ಕ್ಷಣ
ಸ್ವರ್ಗ ಕಾಣುವ ಬಯಕೆಯಲ್ಲಿ
ಏನೇನೋ ಎಡವಟ್ಟು ಮಾಡುವರು ಜಗದಲ್ಲಿ
ಪುಣ್ಯವಂತೆ ಪಾಪವಂತೆ ಅದಂತೆ ಇದಂತೆ
ಎಲ್ಲಾ ಊಹೆಗಳ ಕಂತೆ...
ಕೆಲವರು ಪಾಪಿಯಾಗಲು ಸೈ, ಮತ್ತೆ ಹಲವರು ಸ್ವರ್ಗಕ್ಕೆ ಜೈ
ಪ್ರೀತಿ, ವ್ಯಾಮೋಹಗಳೆಂಬ ಬಯಕೆಗಳ ಸರಮಾಲೆ
ಮೋಸ, ವಂಚನೆಗಳೆಂಬ ಸಮಸ್ಯೆಗಳ ಸಂಕೋಲೆ
ಪೂಣಿಸಿದಷ್ಟು ಬಿಗಿಯುತ್ತಲೇ ಸಾಗುತ್ತೆ...
ಈ ಎಲ್ಲಾ ಜಂಜಾಟ ಮರೆತು ಬಿಡಿ.. ಜಮ್ಮು ಕಾಶ್ಮೀರದ ಕಡೆ ನಡಿ
ಸ್ವರ್ಗ ಕಾಣುತ್ತೆ... ದಾರಿ ನರಕದ ಅನುಭವ ನೀಡುತ್ತೆ.
ಬೈಕ್ ಸಾಗುವ ಜಗತ್ತಿನ ಅತೀ ಎತ್ತರದ ಸ್ಥಳಕ್ಕೆ ಸಾಗಿಬಂದ ಅಭೂತಪೂರ್ವ ಅನುಭವದ ಮೆಲುಕು ನೋಟ.
ಒಂದೊಂದು ವಯೋಮಿತಿಯವರಿಗೆ ಒಂದೊಂದು ಆಸಕ್ತಿ, ಯುವಕರಾಗಿದ್ದಾಗಿನ ಆಸಕ್ತಿ ಮುಂದೆ ಮತ್ತೇನೋ ಆಗಿ ಬದಲಾಗುವುದು ಸಹಜ. ಹೆಚ್ಚಿನ ಯುವಕರಿಗೆ ಬೈಕ್ ರೈಡಿಂಗ್ನ ಕ್ರೇಜ್ಹ್ ಇದ್ದೇ ಇರುತ್ತದೆ.. ಅದಕ್ಕೆ ನಾನಂತೂ ಹೊರತಲ್ಲ. ಇನ್ನು ಹಲವರಿಗೆ ಲಾಂಗ್ ರೈಡ್ ಎಂದರೆ ಬಹಳ ಇಷ್ಟ. ಈ ಮನೋಭಾವದ ಪ್ರತೀ ಬೈಕ್ ಸವಾರನ ಕನಸು ಏನು ಅಂತ ಕೇಳಿದರೆ ಬಹುವಾಗಿ ಕೇಳಿ ಬರುವುದು ಲೇಹ್-ಲಡಾಕ್ ಬೈಕ್ ಟ್ರಿಪ್. ಬೈಕ್ ರೈಡಿಂಗ್ ಮಟ್ಟಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ನನಸು ಮಾಡಿಕೊಳ್ಳುವ ಕನಸು ಇದು. ಯಾಕಂದ್ರೆ ಇದು ಇರುವುದು ಭಾರತದ ಶಿಖರದಲ್ಲಿ! ತಕ್ಷಣ ಹೋಗಿ ಬರುತ್ತೇನೆ ಅಂತ ಹೊರಡುವಷ್ಟು ಸುಲಭದಲ್ಲಿ ಕೈಗೆಟಕುವ ಕನಸು ಇದಲ್ಲಾ ಹಾಗಂತ ಅಸಾಧ್ಯವಾದದ್ದೂ ಅಲ್ಲ. ಒಂದಷ್ಟು ಮಾನಸಿಕ, ಆರ್ಥಿಕ ಹಾಗೂ ಇನ್ನಿತರ ತಯಾರಿಗಳೊಂದಿಗೆ ಬೈಕ್ ಚಲಾಯಿಸುವಲ್ಲಿ ನೈಪುಣ್ಯತೆ ಇದ್ದರೆ ಸಾಕು. ನಿಮ್ಮ ತಾಳ್ಮೆ, ಬೈಕ್ ಚಲಾಯಿಸುವಲ್ಲಿ ಇರುವ ನೈಪುಣ್ಯತೆಗೆ, ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಮನಸ್ಥಿತಿ ಇವೆಲ್ಲದಕ್ಕೂ ಪರೀಕ್ಷೆ ಈ ಯಾನ.
ದೆಹಲಿಯ ಬಿಸಿ, ಮನಾಲಿಯ ಛಳಿ, ಲೇಹ್-ಲಡಾಕ್ ಬೆಟ್ಟದ ಹಿಮ, ಪಂಜಾಬ್ ಪ್ರಾಂತ್ಯದ ಮಳೆ ಇವೆಲ್ಲವನ್ನೂ ಒಂದೇ ಪ್ರಯಾಣದಲ್ಲಿ ಒದಗಿಸಿದ ಅವಿಸ್ಮರಣೀಯ ರೈಡ್ ಇದು.
ಮೂರು ಜನ ಸ್ನೇಹಿತರ ನಮ್ಮ ತಂಡಕ್ಕೆ ಮಂಗಳೂರಿನಿಂದ ಬೈಕ್ ಸಹಿತವಾಗಿ ಗ್ರೀನ್ ಸಿಗ್ನಲ್ ತೋರಿಸಿದ್ದು ನಿಜ್ಹಾಮುದ್ದೀನ್ ಎಕ್ಸ್ ಪ್ರೆಸ್ ಟ್ರೈನ್. ಎರಡು ದಿನಗಳ ರೈಲುವಾಸದ ಬಳಿಕ ದೆಹಲಿ ತಲುಪಿ ಸ್ನೇಹಿತರ ಮನೆ ಸೇರಿಕೊಂಡೆವು. ಮರುದಿನ ಬೆಳ್ಳಿಗ್ಗೆ 6 ಗಂಟೆಗೆ ನಮ್ಮ ಬೈಕ್ ಪ್ರಯಾಣ ಪ್ರಾರಂಭವಾಯಿತು.
ಅಂದಿನ ಪ್ರಯಾಣ ದೇಹಲಿಯಿಂದ ಕುಲು-ಮನಾಲಿಗೆ ತಲುಪುವುದಾಗಿತ್ತು. ಇದು ಸುಮಾರು 538 ಕಿ.ಮೀ ಗಳ ದೂರ. ಕುಲು ಮನಾಲಿ ಈ ರಸ್ತೆಯಲ್ಲಿ ಸಾಗುವಾಗ ಪ್ರಕೃತಿಯ ಸೌಂದರ್ಯವನ್ನು ನೋಡುವುದೇ ಆನಂದ. ಬೆಟ್ಟದ ಬದಿ ಕೊರೆದು ನಿರ್ಮಿಸಿದ ರಸ್ತೆಯಲ್ಲಿ ಒಂದೆಡೆ ಮೇಲಿಂದ ಜಾರಿ ಬರುವ ಕಲ್ಲುಗಳಾದರೆ ಮತ್ತೊಂದೆಡೆ ಪ್ರಪಾತ, ಅದರಾಚೆ ಅಲ್ಲಲ್ಲಿ ಜಲಪಾತಗಳ ಸರಣಿ. ಇವೆಲ್ಲವನ್ನು ನೋಡುತ್ತಾ ನೋಡುತ್ತಾ ಸಂಜೆ 7 ಗಂಟೆಯ ಒಳಗಾಗಿ ಮನಾಲಿಯ ಹೊಟೇಲ್ ಒಂದರ ರೂಂಗೆ ಸೇರಿಕೊಂಡೆವು. ಮರುದಿನ ಮುಂಜಾನೆ ಅಲ್ಲಿಯೇ ಇರುವ ರಾಮ ದೇವಸ್ಥಾನ, ಹಿಡಿಂಬಾ ದೇವಸ್ಥಾನ ಹಾಗೂ ಅಲ್ಲಿನ ವಿಭಿನ್ನ ರೀತಿಯ ವರ್ಣಮಯ ಮಾರುಕಟ್ಟೆ ಸುತ್ತಿ ಆನಂದಿಸಿದೆವು. ಅತ್ತ ಕಡೆ ಹೆಚ್ಚಾಗಿ ಬೌಧ ಧರ್ಮಿಯರು ಹಾಗೂ ಅವರ ಸಂಸ್ಕೃತಿಯೇ ಹೆಚ್ಚಾಗಿ ಕಾಣಸಿಗುತ್ತದೆ. ಇಲ್ಲಿರುವ ರಾಮ ದೇವಾಲಯದ ಬಳಿ ಐತಿಹಾಸಿಕ ಹಿನ್ನಲೆಯುಳ್ಳ ಬಿಸಿ ನೀರಿನ ಕೊಳ ಒಂದಿದೆ. ಇಲ್ಲಿ ಮಿಂದೆದ್ದರೆ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯೂ ಇದೆ. ಜತೆಗೆ ಇಲ್ಲಿರುವ ಪ್ರಾಚೀನ ಹಿಡಿಂಬಾ ದೇವಾಲಯ ಹಾಗೂ ಅಲ್ಲಿನ ಬೃಹತ್ ಮರಗಳು ಆಹಾಃ ನೋಡುವುದೇ ಆನಂದ.
ಮರುದಿನ ಮನಾಲಿಯ ಡಿಸಿ ಕಛೇರಿಯಿಂದ ಅನುಮತಿ ಪಡೆದು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಬೈಕ್ ಹಿಂದಿನ ಸೀಟ್ನಲ್ಲಿ ನಮ್ಮ ಬ್ಯಾಗ್ ಗಳ ಜತೆಗೆ 5ಲೀ. ಪೆಟ್ರೋಲ್ ಕ್ಯಾನ್ ಗಳನ್ನು ಕಟ್ಟಿ, ಎಲ್ಲಾ ಸುರಕ್ಷತಾ ಗಾರ್ಡ್ ಗಳನ್ನು ಧರಿಸಿ ಪ್ರಯಾಣ ಮುಂದುವರೆಸಿದೆವು. ಪೆಟ್ರೋಲ್ ಕ್ಯಾನ್ ಯಾಕಂದ್ರೆ ಅಲ್ಲಿ ಮುಂದೆ ಸಾಗಿದಂತೆ ಪೆಟ್ರೋಲ್ ಪಂಪ್ ಗಳು ಬಹಳಷ್ಟು ವಿರಳ ಹಾಗಾಗಿ ಈ ವ್ಯವಸ್ಥೆ ಅನಿವಾರ್ಯ.
ನಮ್ಮ ಇಂದಿನ ಗುರಿ ಮನಾಲಿಯಿಂದ ಸರ್ಚು ಎಂಬ ಪ್ರದೇಶ ತಲುಪುವುದು. ಇಡೀ ಪ್ರಯಾಣದಲ್ಲಿ ಅತ್ಯಂತ ಕಠಿಣ ಮಾರ್ಗ ಇದು. ಬೈಕ್ ರೈಡರ್ ಗಳಿಗೆ ಎದುರಾಗುವ ದೊಡ್ಡ ಸವಾಲು ರೊಟಂಗ್ ಪಾಸ್ ದಾಟುವುದು. ನಾನು ಆಗಲೇ ಹೇಳಿದಂತೆ ನಿಮ್ಮ ತಾಳ್ಮೆ, ಏಕಾಗ್ರತೆ, ಚಾಲನಾ ಚಾಕಚಕ್ಯತೆ ಇವೆಲ್ಲದಕ್ಕೆ ಪರೀಕ್ಷೆ ಒಡ್ಡುವ ಮಾರ್ಗ ಇದು.
ಮೊದ ಮೊದಲು ರಸ್ತೆ ಉತ್ತಮವಾಗಿದ್ದರಿಂದ ಪ್ರಯಾಣ ಅಷ್ಟೇನು ಕಷ್ಟಕರವಾಗಿರಲಿಲ್ಲ. ನಮ್ಮ ಆಗುಂಬೆ ಘಾಟಿಗಿಂತಲೂ ಕಠಿಣವಾದ ಘಾಟಿಯಲ್ಲಿ ಸಾಗಬೇಕಾಗಿತ್ತು. ಆದರೆ ಮುಂದೆ ಸಾಗಿದಂತೆ ಡಾಂಬರು ರಸ್ತೆ ಮಾಯವಾಗಿತ್ತು. ಜೇಸಿಬಿಯಿಂದ ಇತ್ತೀಚಿಗಷ್ಟೇ ನಿರ್ಮಾಣವಾದ ರಸ್ತೆಯಂತಹ ಕೆಟ್ಟದಾದ ಘಾಟಿ ರಸ್ತೆ ಅದು. ಒಂದೆಡೆ ಪ್ರಪಾತ ಮತ್ತೊಂದೆಡೆ ಮುಂಬದಿಯಿಂದ ಬರುವ ಲಾರಿಗಳು, ಮಿಲಿಟರಿ ಘನ ವಾಹನಗಳು ಹಾಗೂ ಅವು ಹೊತ್ತು ತರುವ ಧೂಳು, ಅಲ್ಲಲ್ಲಿ ಜೀವಂತ ತೋಡುಗಳು, ಅಷ್ಟೂ ಸಾಲದ್ದಕ್ಕೆ ಆಮ್ಲಜನಕದ ಕೊರತೆ. ಎಷ್ಟೇ ಎಕ್ಸಲೇಟರ್ ಕೊಟ್ಟರೂ ಬೈಕ್ 40 ಕ್ಕಿಂತ ಹೆಚ್ಚಿನ ವೇಗಗದದಲ್ಲಿ ಸಾಗದಂತಹ ಸ್ಥಿತಿ, ಜತೆಗೆ ಕೊರೆಯುವ ಛಳಿ. ಅಬ್ಬಾ... ಸಾಗಿದಷ್ಟು ಮುಗಿಯದ ದಾರಿ. ಅದೂ ಕೂಡಾ ಸುಮಾರು 250ಕಿ.ಮೀ ಗಿಂತಲೂ ಹೆಚ್ಚಿನ ಘಾಟಿ ಅದು. ಈ ರಸ್ತೆ ಒಮ್ಮೆಗೆ ನಮ್ಮ ಬೈಕ್ ರೈಡಿಂಗ್ ಕ್ರೇಜ್ಃ ಕೊಂದೇ ಬಿಡುತ್ತದೆ. ಒಂದೇ ಪದದಲ್ಲಿ ಹೇಳುವುದಾದರೆ ಸ್ವರ್ಗದಲ್ಲಿ ನರಕದಂತಹ ದಾರಿ.
ಅಷ್ಟಾದರೂ ಅಲ್ಲಿನ ಪ್ರಕೃತಿ ಸೌಂದರ್ಯ ನಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ದೂರದ ಬೆಟ್ಟದಲ್ಲಿ ಕಾಣುವ ಹಿಮ ಆಕರ್ಷಿಸುತ್ತದೆ.
ಅಂದು ಮಾತ್ರ ನಾನು ನಮ್ಮ ಗುರಿ ತಲುಪಲು ಸಾಧ್ಯವಾಗೇ ಇಲ್ಲ. ಕೊನೆಗೆ ಅಲ್ಲೇ ಇದ್ದ ಏಕೈಕ ಟೆಂಟ್ ನ ಲಾಡ್ಜ್ ನಲ್ಲಿ ತಂಗಿದೆವು. ಅಷ್ಟಾಗಲೇ ರಾತ್ರಿ 8 ಗಂಟೆ ಕಳೆದಿತ್ತು. ಭೀಕರ ಛಳಿ ಅಲ್ಲೇ ಇದ್ದ ರಗ್ ಹೊದ್ದು ಮಲಗಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಯ ವ್ಯಕ್ತಿಯೊಬ್ಬರು ನಮ್ಮ ಮೇಲೆ ಮತ್ತೊಂದು ಹಾಸಿಗೆಯನ್ನೇ ಹಾಕಿ ಹೊದೆಸಿದರು ಆದರೂ ಛಳಿ ಮಾತ್ರ ಸಹಿಸಲಸಾಧ್ಯ. ಮತ್ತೆ ಮತ್ತೆ ನೆನಪಾಗುವ ಅನುಭವ ಅದು.
ಮರುದಿನ ಬೆಳಿಗ್ಗೆ 8 ಗಂಟೆಗೆ ಪ್ರಯಾಣ ಮುಂದುವರೆಸಿದೆವು ಅಂದು ಸರ್ಚು, ಕುಕ್ಷಿ ಮುಖಾಂತರ ನೇರವಾಗಿ ಲಡಾಕ್ ಸಾಗುವ ನಮ್ಮ ನಿರ್ಧಾರದಂತೆಯೇ ಅದೇ ಮಣ್ಣಿನ ರಸ್ತೆಯಲ್ಲಿ ಸಾಗುತ್ತಿರಲು ರಾತ್ರಿ 8 ಆಗುವಷ್ಟರಲ್ಲಿ ಲಡಾಕ್ ಪಟ್ಟಣದ ಲೈಟ್ಗಳು ದೂರದಲ್ಲಿ ಕಾಣಿಸತೊಡಗಿದವು. ಅದೇನೋ ಸಂತೋಷ. ಜನವಸತಿಯೇ ಇಲ್ಲದ ಆ ಬೋರು ಬೆಟ್ಟಗಳು, ಮಣ್ಣಿನ ರಸ್ತೆ ನೋಡಿ ನೋಡಿ ಸಾಕಾಗಿದ್ದ ನಮಗೆ ನಾಗರೀಕ ಪ್ರಪಂಚಕ್ಕೆ ಮರಳಿದ ಸಂತೋಷ. ಹೀಗೆ ಲಡಾಕ್ ತಲುಪಿ ಅಲ್ಲೇ ಒಂದು ಲಾಡ್ಜ್ನಲ್ಲಿ ತಂಗಿದೆವು. ಕನಸಲ್ಲೆಲ್ಲಾ ಆ ಮಣ್ಣಿನ ರಸ್ತೆಯಲ್ಲಿ ಸಾಗುವ ದೃಷ್ಯಗಳೇ ಮರುಕಳಿಸುತ್ತಿದ್ದವು.
ಮುಂಜಾನೆ ಎದ್ದು ಲೇಹ್-ಲಡಾಕ್ ಪಟ್ಟಣದತ್ತ ಬಂದು ಒಂದಷ್ಟು ಸುತ್ತಾಡಿದೆವು. ಮನಾಲಿಯಂತೆ ಇಲ್ಲಿಯೂ ಬೌಧ ಧರ್ಮದ ಜನರೇ ಹೆಚ್ಚು. ಪ್ರವಾಸೋದ್ಯಮವೇ ಇಲ್ಲಿನ ಜನರ ಮೂಲ ಕಸುಬು. ಇಲ್ಲಿದ್ದ ಪಂಜಾಬಿ ಡಾಬಾದಲ್ಲಿ ತಿಂದ ಗುಲಾಬ್ಜಾಮೂನ್ ರುಚಿ ಇವತ್ತಿಗೂ ಬಾಯಲ್ಲಿ ನೀರು ತರಿಸುತ್ತದೆ. ವಿವಿಧ ಕಲಾತ್ಮಕ ಹಿತ್ತಾಳೆ ಪಾತ್ರೆಗಳು, ಖಡ್ಗಗಳು, ಬೀಗ ಇನ್ನಿತರ ವಸ್ತುಗಳು, ಉಡುಪುಗಳು, ಜಾಕೆಟ್ಗಳು ಇಲ್ಲಿನ ಆಕರ್ಷಣೆ. ಅಲ್ಲಲ್ಲಿ ಸ್ತೂಪಗಳು, ಬುದ್ಧಿಸ್ಟ್ ಮಾಂಕ್ ಗಳು ಬಹಳ ಚಂದ. ಇಲ್ಲಿ ಬುದ್ಧಿಸ್ಟ್ ಯುನಿವರ್ಸಿಟಿಯೂ ಸಹ ಇದೆ. ಲೇಹ್-ಲಡಾಕ್ಅನ್ನು ಕೋಲ್ಡ್ ಡೆಸರ್ಟ್ ಅಂತಲೂ ಕರಿತಾರೆ. ಇಲ್ಲಿನ ದನಗಳು ಕಾಡುಕೋಣದ ರೀತಿಯ ಉದ್ದದ ಕೂದಲುಗಳನ್ನು ಹೊಂದಿವೆ. ಇನ್ನು ಇಲ್ಲಿ ಬೀದಿ ನಾಯಿಗಳು ನಮ್ಮಲ್ಲಿನ ಹೈ ಬ್ರೀಡ್ ನಾಯಿಗಳಂತೆ ಕಾಣುತ್ತವೆ.
ಮರುದಿನ ಮುಂಜಾನೆ ಅಲ್ಲಿಂದ ಪ್ಯಾಂಗಾನ್ ಲೇಕ್ ನೋಡಲು ಹೊರಟೆವು. ಲೇಹ್-ಲಡಾಕ್ ನಿಂದ ಸುಮಾರು 140 ಕಿ.ಮೀ ದೂರ (ಸುಲಭದಲ್ಲಿ ಹೇಳುವುದಾದರೆ 3 ಈಡಿಯಟ್ಸ್ ಚಿತ್ರದ ಕೊನೇಯ ಸಿನ್ ನಲ್ಲಿ ತೋರಿಸಲಾದ ಕೆರೆ)
ಮಣ್ಣಿನ ರಸ್ತೆಯಾಗಿದ್ದರೂ ದಾರಿಯುದ್ದಕ್ಕೂ ಹಿಮದ ಹೊದಿಕೆ. ಉಷ್ಣತೆ ಸುಮಾರು ಮೈನಸ್ 8 ಡಿಗ್ರಿ. ಆ ಹಿಮದಲ್ಲಿ ಆಟವಾಡುತ್ತಾ ಪ್ಯಾಂಗಾನ್ ತಲುಪುವಷ್ಟರಲ್ಲಿ ಮಧ್ಯಾಹ್ನ ಆಗಿತ್ತು. ಬೃಹದಾದ ಆ ಕೆರೆಯಲ್ಲಿ ಏಳು ಬಣ್ಣಗಳು ಗೋಚರಿಸುತ್ತವೆ. ಇದು ಭಾರತ ಚೀನಾ ಎರಡೂ ದೇಶಗಳನ್ನು ಹಂಚಿಕೊಂಡಿದೆ.
ಇಲ್ಲಿ 3 ಈಡಿಯಟ್ಸ್, ರಾಂಚೋ ಮುಂತಾದ ಹೆಸರಿನ ಡಾಭಾಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಅಲ್ಲಿ ತಿಂಡಿ ತಿಂದು ವಾಪಾಸ್ ಲೇಹ್-ಲಡಾಕ್ ತಲುಪುವಷ್ಟರಲ್ಲಿ ರಾತ್ರಿ 8 ಕಳೆದಿತ್ತು.
ಮರುದಿನ ಬೆಳಗ್ಗೆ ಎಂದಿಗಿಂತ ತುಸು ಹೆಚ್ಚಿನ ಹುರಪು ನಮ್ಮಲ್ಲಿತ್ತು. ಕಾರಣ ಅಂದು ನಾವು ಹೋಗಲಿಕ್ಕಿದ್ದದ್ದು ವಾಹನ ಸಾಗುವ ಜಗತ್ತಿನ ಅತೀ ಎತ್ತರದ ಪ್ರದೇಶಕ್ಕೆ. ಅದುವೇ ಖದರ್ುಂಗ್ಲಾ ಪಾಸ್. ಸಮುದ್ರ ಮಟ್ಟದಿಂದ 18380 ಅಡಿ ಎತ್ತರ. ದಾರಿಯುದ್ದಕ್ಕೂ ಹಿಮವೇ ಕಾಣಿಸುತ್ತಿತ್ತು. ಘಾಟಿಯಲ್ಲಿ ಮೇಲೆ ಸಾಗಿದಂತೆಲ್ಲಾ ಛಳಿ ಜಾಸ್ತಿಯಾಗುತ್ತಿತ್ತು. ನಾವು ಖರ್ಡುಂಗ್ಲಾ ಪಾಸ್ ತಲುಪುವ ವೇಳೆಗೆ ಅಲ್ಲಿ ಮೈನಸ್ 12 ಡಿಗ್ರಿ ತಾಪಮಾನ. ಉಫ್....ನೆನಪಿಸಿಕೊಂಡರೆನೇ ಛಳಿ ಪ್ರಾರಂಭವಾಗುತ್ತೆ. ಛಳಿ ಮಾತ್ರವಲ್ಲದೇ ಅಲ್ಲಿ ಆಮ್ಲಜನಕದ ಪ್ರಮಾಣವೂ ಕಡಿಮೆಯೇ. ನಾನು ಮೊದಲು ಹೇಳಿದಂತೆ ಲೇಹ್-ಲಡಾಕ್ ಪ್ರಯಾಣದಲ್ಲಿ ಏಕಾಗ್ರತೆ, ಮನೋಸ್ಥೆರ್ಯವೂ ಬೇಕು ಅಂದಿದ್ದಕ್ಕೆ ಇಂತಹ ವಾತಾವರಣವೇ ಕಾರಣ. ವಾತಾವರಣದಲ್ಲಿ ಆಮ್ಲಜನಕ ಕಡಿಮೆ ಇದ್ದಾಗ ಮೆದುಳಿಗೆ ಆಮ್ಲಜನಕ ಪೂರೈಕೆ ಕಡಿಮೆಯಾಗಿ ಸಿಟ್ಟು ಬರುವ, ಉಸಿರಾಟದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ನಮ್ಮ ಮನೋಸ್ಥೈರ್ಯದಿಂದ ಮಾತ್ರ ಇವೆಲ್ಲದ್ದನ್ನು ಎದುರಿಸಿ ಅಲ್ಲಿ ಮೋಜು ಮಾಡಲು ಸಾಧ್ಯ. ಅಂತಹ ಕ್ಲಿಷ್ಟಕರ ವಾತಾವರಣದಲ್ಲಿಯೂ ಹಿಮದಲ್ಲಿ ಆಟವಾಡಿ ಬಂದಿದ್ದೇವೆ ಅನ್ನುವುದು ನಮಗೆ ಹೆಮ್ಮೆ.
ಇನ್ನೊಂದು ವಿಚಾರ ಕೇವಲ ಮೈನಸ್ 12 ಡಿಗ್ರಿ ತಾಪಮಾನದಲ್ಲಿ ಕೇವಲ 45 ನಿಮಿಷ ಮಾತ್ರ ನಮಗೆ ಸಹಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಅಲ್ಲಿರುವ ನಮ್ಮ ಸೈನಿಕರು ಮೈನಸ್ 50 ಡಿಗ್ರಿ ತಾಪಮಾನದಲ್ಲಿ ನಮ್ಮ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ. ಸೇನೆಯ ಕೆಲವರಲ್ಲಿ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ, ಈ ಛಳಿ ಏನೂ ಅಲ್ಲ ಮೈನಸ್ 50 ದಾಟುತ್ತದೆ ಅಂತ. ಅಂತಹ ಸಂದರ್ಭದಲ್ಲಿ ಇಲ್ಲಿ ನಾವಲ್ಲದೇ ಬೇರೆ ಯಾರೂ ಇರುವುದಿಲ್ಲ ಎಂದದ್ದನ್ನು ಕೇಳಿ ಅಲ್ಲಿಗೆ ತೆರಳಿ ಖುದ್ದಾಗಿ ನೋಡಿದ ನನಗೆ ನಂಬಲು ಸಾಧ್ಯವಾಗಿಲ್ಲ. ಅಂತದರಲ್ಲಿ ನಗರದಲ್ಲೇ ಇದ್ದ ಜನರು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ ಸೇನೆಯ ಪರಿಶ್ರಮ, ನಮಗಾಗಿ ಅವರು ಪಡುತ್ತಿರುವ ಕಷ್ಟ ಇವ್ಯಾವುದನ್ನು ತಿಳಿದುಕೊಳ್ಳದೇ ಸುಮ್ಮನೆ ಖಂಡಿತ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಒಂದು ವೇಳೆ ಸಣ್ಣ ತಪ್ಪು ಮಾಡಿದ್ದರೂ ಸಹ ಧೂಷಿಸುವ ಅಗತ್ಯವಿಲ್ಲ. ಅಂತಹ ವಾತಾವರಣದಲ್ಲಿ ಸ್ಥಿರ ಮನಸ್ಥಿತಿಯನ್ನು ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಇದು ಖರ್ಡುಂಗ್ಲಾ ಪಾಸ್ ಕಲಿಸಿಕೊಟ್ಟ ಪಾಠ. ಅಲ್ಲಿಂದ ಮರಳಿ ಲೇಹ್-ಲಡಾಕ್ ತಲುಪುವಷ್ಟರಲ್ಲಿ ಸಂಜೆ 7.00 ಗಂಟೆ ಕಳೆದಿತ್ತು.
ಮರುದಿನ ಮ್ಯಾಗ್ನೆಟಿಕ್ ಹಿಲ್ ಮುಖಾಂತರ ನೇರವಾಗಿ ಕಾರ್ಗಿಲ್ ತಲುಪಿದೆವು.
ಕಾರ್ಗಿಲ್ ನ ಹೊಟೇಲ್ ಒಂದರಲ್ಲಿ ರಾತ್ರಿ ಕಳೆದು ಮರುದಿನ ಕಾರ್ಗಿಲ್ ನ ವಾರ್ ಮೆಮೊರಿಯಲ್ ಭೇಟಿ ನೀಡಿ ಅಲಿನ ಯುದ್ಧ ಭೂಮಿ, ಯುದ್ಧ ನಡೆದ ರೀತಿ ಇವೆಲ್ಲದರ ಡಾಕ್ಯುಮೆಂಟ್ರಿ ನೋಡಿಕೊಂಡು ನೇರವಾಗಿ ಶ್ರೀ ನಗರ ಮುಖಾಂತರ ಉದಂಪುರ ತಲುಪಿದೆವು ಅಷ್ಟರಲ್ಲಿ ರಾತ್ರಿ 10 ಗಂಟೆ ಕಳೆದಿತ್ತು. ಅಲ್ಲಿ ಹೊಟೇಲ್ ಒಂದರಲ್ಲಿ ರೂಂ ಪಡೆದು ರಾತ್ರಿ ಕಳೆದೆವು.
ಇನ್ನು ಶ್ರೀನಗರದಲ್ಲಿ ಪ್ರತ್ಯೇಕತಾವಾದಿಗಳು ಗಲಾಟೆ ಎಬ್ಬಿಸುತ್ತಿರುವುದರಿಂದ ಕಳೆದ 3 ತಿಂಗಳಿನಿಂದ ಕರ್ಫ್ಯೂ ವಿಧಿಸಲಾಗಿದೆ. ಕಳೆದ 3 ತಿಂಗಳಿನಿಂದ ಯಾವುದೇ ದೈನಂದಿನ ಚಟುವಟಿಕೆಗಳಿಲ್ಲದೇ ನಗರ ಕೊರಗುತ್ತಿದೆ. ನಾವಿಲ್ಲಿ ಒಂದು ದಿನ ನಗರ ಬಂದ್ ಆದರೂ ಪರದಾಡುತ್ತೇವೆ ಅಂತಹದಲ್ಲಿ ಅಲ್ಲಿನ ಜನರ ಸ್ಥಿತಿ ಹೇಗಿರಬಹುದು ಯೋಚಿಸಿ.
ಮರುದಿನ ಬೆಳಗ್ಗೆ ಉದಂಪುರದಿಂದ ನೇರವಾಗಿ ಜಮ್ಮು ತಲುಪಿದೆವು ಜಮ್ಮುವಿನಲ್ಲಿ ಚಂದ್ರದರ್ಶನ ಮಾಡಿ ಮರುದಿನ ಅಲ್ಲಿಂದ ನೇರವಾಗಿ ಅಮೃತ್ಸರ(ಪಂಜಾಬ್) ತಲುಪಿದೆವು. ಈ ಎಲ್ಲಾ ರಸ್ತೆಗಳು ಸಾಮಾನ್ಯವಾಗಿ ದ್ವಿಪಥ ರಸ್ತೆಗಳಾಗಿದ್ದರಿಂದ ಪ್ರಯಾಣ ಸುಲಭವಾಗಿಯೇ ಸಾಗಿತು. ಮರುದಿನ ಅಲ್ಲಿಂದ ವಾಘಾ ಗಡಿಗೆ ತೆರಳಿ ಭಾರತ ಪಾಕಿಸ್ಥಾನದ ಗೇಟ್ನಲ್ಲಿ ನಡೆಯುವ ಪೆರೆಡ್ ನೋಡಿಕೊಂಡು ಬಂದೆವು. ವಾಘಾ ಗಡಿಯಿಂದ ಪಾಕಿಸ್ಥಾನದ ಲಾಹೋರ್ ಕೇವಲ 23 ಕಿ.ಮೀ ದೂರ! ಅದೇ ದಿನ ಸಂಜೆ ಗೋಲ್ಡನ್ ಟೆಂಪಲ್ ನೋಡಿ ಮರುದಿನ ನೇರವಾಗಿ ವಾಪಾಸ್ ದೆಹಲಿಗೆ ಪ್ರಯಾಣ ಬೆಳೆಸಿದೆವು.
ರಾತ್ರಿ 8 ಗಂಟೆ ಆಗುವಷ್ಟರಲ್ಲಿ ದೆಹಲಿಯ ಸ್ನೇಹಿತರ ಮನೆ ತಲುಪಿದ್ದೆವು. ಲೇಹ್-ಲಡಾಕ್ ನ ಆ ಮಣ್ಣಿನ ರಸ್ಥೆಯಲ್ಲಿ ಕಷ್ಟ ಪಟ್ಟು ಬೈಕ್ ಚಲಾಯಿಸಿದ ನಮಗೆ ಈ ದ್ವಿಪಥ ರಸ್ತೆಗಳಲ್ಲಿನ 451 ಕಿ.ಮೀ ಅಂತರವೂ ಕನಿಷ್ಟವೆನಿಸುತ್ತಿತ್ತು.
ಮರುದಿನ ಬೈಕ್ ಗಳನ್ನು ಟ್ರೈನ್ ನಲ್ಲಿ ಪಾರ್ಸೆಲ್ ಮಾಡಿ ನಾವೂ ಮುಂದಿನ ಟ್ರೈನ್ ನಲ್ಲಿ ಊರು ಸೇರಿದೆವು.
ಈ ಮುಂಚೆ ಹಲವು ಬೈಕ್ ರೈಡ್ ಹೋಗಿದ್ದೇನೆ. ಆದರೆ ಲೇಹ್-ಲಡಾಕ್ ಪ್ರಯಾಣದ ಅನುಭವ ಮಾತ್ರ ಇವೆಲ್ಲವನ್ನೂ ಮೀರಿದ್ದು. ನೀವು ಚಿತ್ರದಲ್ಲಿ ಕಾಣುವ ರಸ್ತೆ, ಲೇಖನಲ್ಲಿ ಹೇಳಲಾದ ವಾತಾವರಣದ ವಿವರ ಇವೆಲ್ಲವನ್ನೂ ಓದಿ ಈಗ ನೀವೇನು ಊಹಿಸಿಕೊಳ್ಳುತ್ತಿದ್ದೀರೋ ವಾಸ್ತವ ನಿಮ್ಮ ಊಹೆಗಿಂತಲೂ ಒಂದು ಹೆಜ್ಜೆ ಮುಂದಿದೆ ಅನ್ನುವುದನ್ನು ಮರೆಯಬೇಡಿ.
ಈ ಅವಿಸ್ಮರಣೀಯ ಯಾತ್ರೆಯಲ್ಲಿ ನನ್ನೊಂದಿಗೆ ಜತೆಯಾದ ಇಬ್ಬರು ಗೆಳೆಯರು, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.
ಹೆಚ್ಚಿನ ಫೂಟೋಸ್ ಗಾಗಿ ಫೇಸ್ ಬುಕ್ ಈ ಲಿಂಕ್ ಅನ್ನು ಕ್ಲಿಕ್ಕಿಸಿ:https://www.facebook.com/narayanagore/media_set?set=a.1519144901445581.1073741851.100000502582580&type=3
ಕೆ.ನಾ.ಗೋರೆ
ಕೆ.ನಾ ಕಿವಿಮಾತು: ಯುವಕರಾಗಿದ್ದಾಗ ಏನಾದರು ಧನಂಧಾರಿ ಕೆಲಸ, ಸಾಧನೆ, ಸಾಹಸಗಳನ್ನು ಮಾಡಿದರೆ ಮಾತ್ರ ಮುಂದೆ ನೆನೆದು ಖುಷಿ ಪಡಲು ಏನಾದರು ಉಳಿಯುತ್ತದೆ. ನೋಡಿ ಮುಂದಿನ ತಲೆಮಾರಿನವರಲ್ಲಿ ಹೇಳಿಕೊಳ್ಳಲಾದರೂ ಇಂದು ಏನಾದರೂ ಮಾಡಿ.
ಮುಂದೊಂದು ದಿನ ಜೀವನದ ಪ್ರತೀ ಪುಠಗಳನ್ನು ಮೆಲುಕು ಹಾಕಿಕೊಳ್ಳುವ ಕಾಲ ಬಂದಾಗ 'ಛೇ ಯೌವನದಲ್ಲಿ ಹೇಳಿಕೊಳ್ಳುವ, ನೆನಪಿಸಿಕೊಳ್ಳುವ ಏನನ್ನೂ ಮಾಡಿಲ್ಲ ಜೀವನದ ಅಮೂಲ್ಯ ಕ್ಷಣಗಳನ್ನು ವ್ಯರ್ಥಮಾಡಿದೆ' ಎಂಬ ಭಾವನೆ ಬರಬಾರದು ನೋಡಿ.
ಗುರುವಾರ, ಸೆಪ್ಟೆಂಬರ್ 3, 2015
ಗುರುವಾರ, ಜೂನ್ 18, 2015
ಬಿರುಗಾಳಿ
ಅದೊಂದು ಸಂಜೆ ಬೈಕ್ ಸ್ಟಾರ್ಟ್ ಮಾಡಿದವನೇ ನೇರವಾಗಿ ಬೀಚ್ ಬಳಿಗೆ ಹೋದೆ. ಪಾರ್ಕಿಂಗ್ ಲಾಟ್ ನಲ್ಲಿ ಬೈಕ್ ಇಟ್ಟು ಮರಳಿನ ರಾಶಿಯಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತಾ ನಡೆಯತೊಡಗಿದೆ. ಎಲ್ಲಿ ಯವರೆಗೆ ! ಯೋಚಿಸಿಯೇ ಇರಲಿಲ್ಲ.
ಬದುಕಿನಲ್ಲಿ ಬೀಸುತ್ತಿದ್ದ ಬಿರುಗಾಳಿ ಎಲ್ಲವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಮನಸ್ಸು ಯಾವ ಪ್ರಶ್ನೇಗಳಿಗೂ ಉತ್ತರ ಹುಡುಕಲಾರದೇ ತೊಳಲಾಡುತ್ತಿತ್ತು. ಈ ಹಿಂದೆ ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದ ಅಲೆಗಳ ಶಬ್ದ ಇಂದೇಕೋ ನಿರ್ಭಾವುಕವಾಗಿದ್ದವು. ನಡೆದು ನಡೆದು ಸುಸ್ತಾಗಿ ಅಲ್ಲೇ ಮರಳಲ್ಲಿ ಮಂಡಿಯೂರಿ ಕಣ್ಣುಮುಚ್ಚಿ ಕುಳಿತುಕೊಂಡೆ.
ಗಾಳಿಯ ರುಯ್... ರುಯ್... ಶಬ್ದ ನನ್ನ ಬದುಕಲ್ಲಿ ಬೀಸಿದ ಬಿರುಗಾಳಿಯನ್ನು ಮತ್ತೆ ಮತ್ತೆ ನೆನಪಿಸುತ್ತಿತ್ತು...
ಹೌದು...ಅತ್ಯಂತ ಸುಖಿ ಜೀವಿ ಅಂದನೇ ನಾನೇ ಅಂತ ಖುಷಿಯಿಂದ ಹೇಳಿಕೊಳ್ಳುವಷ್ಟು ಚಂದದ ಬದುಕು ನನ್ನದಾಗಿತ್ತು. ಅಪ್ಪ ಅಮ್ಮ ಮತ್ತು ನನ್ನನ್ನು ತುಂಬಾ ನೆಚ್ಚಿಕೊಂಡಿದ್ದ ನನ್ನ ಇಬ್ಬರು ಪೋಕಿರಿ ಅಣ್ಣಂದಿರು ಹಾಗೂ ಬಾಲ್ಯದಿಂದಲೇ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ ನನ್ನ ಪ್ರೀತಿಯ ತರಲೆ ಭುವಿ. ಅಪ್ಪ ನಿವೃತ್ತ ಮಾಸ್ಟರ್, ಅಮ್ಮ ಹೌಸ್ ವೈಫ್ ಅಂದರೆ ರಿಯಲ್ ಹೋಮ್ ಮಿನಿಸ್ಟರ್ ಮತ್ತು ಫೈನಾನ್ಸ್ ಮಿನಿಸ್ಟರ್ ಕೂಡಾ.! ಅಣ್ಣಂದಿರಿಬ್ಬರು ಬೆಂಗಳೂರಿನಲ್ಲಿ ಡಾಕ್ಟರ್ಸ್, ಭುವಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ನಾನು ಚೆನ್ನೈನಲ್ಲಿ ಐಟಿ ಉದ್ಯೋಗಿ. ಏನ್ ಮಾಡೊಕಾಗತ್ತೆ ಹೇಳಿ. ಕ್ಯಾಂಪಸ್ ಸೆಲೆಕ್ಷನ್ನಲ್ಲಿ ನನ್ನ ದೌರ್ಭಾಗ್ಯಕ್ಕೆ ಚೈನೈನಲ್ಲಿ ಸಿಕ್ಕಿತು ಅವಳಿಗೆ ಬೆಂಗಳೂರಿನಲ್ಲಿ. ಕಂಪನಿ ಒಂದಾಗಿದ್ದರೂ ಒಂದೇ ಸ್ಥಳದಲ್ಲಿ ಇರಲು ಬಿಡಬೇಕಲ್ಲ ಪಾಪಿಗಳು. ಆದರೂ ಈ ಮೊಬೈಲ್ ಮತ್ತು ಇಂಟರ್ನೆಟ್ ಇದ್ದುದರಿಂದ ನಮ್ಮಿಬ್ಬರ ನಂಟು ಮಧುರವಾಗಿಯೇ ಇತ್ತು. ಒಂದರ್ಥದಲ್ಲಿ ಜಾಲಿ ಜೀವನ.
ಒಂದು ದಿನ ಬೆಳಗ್ಗೆ ಅಮ್ಮ ಪೋನ್ ಮಾಡಿ ಲೋ... ಇವತ್ತು ಅಣ್ಣನಿಗೆ ಹುಡುಗಿ ನೋಡೊಕೆ ಹೋಗ್ತಿದಿವಿ ನೀನೊಬ್ಬ ಮಿಸ್ ಆದಿ ನೋಡು ಅಂದ್ಲು. ಹೌದಮ್ಮ ಏನ್ ಮಾಡ್ಲಿ ಕರ್ಮದ್ದು ರಜೆ ಸಿಗ್ತಿಲ್ಲ ನೀವ್ ಹೋಗಿ ಬನ್ನಿ... ಆ ತರ್ಲೆಗೆ ಬೆಸ್ಟ್ಆಫ್ ಲಕ್ ಅಂತ ಹೇಳು ಅಂತ ಹೇಳಿ ಪೋನ್ ಇಟ್ಟೆ. ಹೌದು ಅವತ್ತು ನನ್ನ ದೊಡ್ಡಣ್ಣ ಸುಕೇಶನಿಗೆ ಹುಡುಗಿ ನೋಡಲು ಹೋಗೋ ಕಾರ್ಯಕ್ರಮ. ನಾನಂತು ತುಂಬಾ ಖುಷಿಯಾಗಿದ್ದೆ.
ಈ ಖುಷಿಯಲ್ಲೇ ಬೇಗ ಬೇಗನೆ ಆಫೀಸ್ ತಲುಪಿ ಎಲ್ಲರಿಗೂ ಗುಡ್ ಮಾರ್ನಿಂಗ್ ಹೇಳಿ ಕೆಲಸ ಪ್ರಾರಂಭಿಸಬೇಕು ಅನ್ನೊ ಅಷ್ಟರಲ್ಲಿ ಒಂದು ಅನ್ನೋನ್ ನಂಬರ್ ನಿಂದ ಪೋನ್ ಬಂತು. ಹಲೋ...ಅಂದೊಡನೆ ಆಚೆಕಡೆಯಿಂದ ನಾನು ಅಂಗಡಿ ರವಿ... ನಿಮ್ಮ ಮನೆಯವರಿಗೆ ಆಕ್ಸಿಡೆಂಟ್ ಆಗಿದೇ ನೀವ್ ಬೇಗ ಹೊರಟು ಬನ್ನಿ ಅಂತ ಗಾಬರಿಯ ಧ್ವನಿ ಕೇಳಿಸಿತು. ನನಗೆ ಮೈಯೆಲ್ಲಾ ಬೆವರತೊಡಗಿತು. ಕೂಡಲೇ ಅಣ್ಣ, ಅಪ್ಪ ಅಮ್ಮ, ಎಲ್ಲರಿಗೂ ಕಾಲ್ ಮಾಡಿದೆ. ಯಾರಿಗೂ ಕಾಲ್ ಸಿಗ್ತಾ ಇರ್ಲಿಲ್ಲ. ತಕ್ಷಣ ಫ್ಲೈಟ್ ನಲ್ಲಿ ಮನೆಗೆ ಹೊರಟೆ. ದಾರಿಯುದ್ದಕ್ಕೂ ಗಂಟೆ ನೋಡುವುದೇ ಕೆಲಸವಾಗಿತ್ತು.
ಮನೆಗೆ ತಲುಪುವಷ್ಟರಲ್ಲಿ ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಭುವಿಯ ಅಪ್ಪ ಶಂಕರ್ ಮಾವ, ಊರವರೆಲ್ಲಾ ಮನೆ ಮುಂದೆ ಜಮಾಯಿಸಿದ್ರು. ಅವರನ್ನೆಲ್ಲಾ ನೋಡಿ ಹೃದಯ ನನಗೇ ಕೇಳಿಸುವಷ್ಟು ಜೋರಾಗಿ ಬಡಿಯ ತೊಡಗಿತ್ತು. ತಕ್ಷಣ ಒಳಗಿನ ಅಂಗಳದ ವರೆಗೆ ಹೋಗಿ ನೋಡಿದರೆ ಮಲಗಿರುವ ನಾಲ್ಕು ಜನರ ಮುಂದೆ ತೆಂಗಿನ ಕಾಯಿಯಲ್ಲಿ ಇಟ್ಟ ದೀಪಗಳು ಪ್ರಜ್ವಲಿಸುತ್ತಿದ್ದವು. ಆ ದೃಶ್ಯವನ್ನು ಕಣ್ಣುಗಳು ನಂಬುವುದಕ್ಕೆ ಸಿದ್ಧವಿರಲಿಲ್ಲ. ಗರಬಡಿದವನಂತೆ ನಿಂತುಕೊಂಡೆ. ಗಂಟಲು ಸಂಪೂರ್ಣವಾಗಿ ಒಣಗಿತ್ತು, ಮಾತೇ ಬರುತ್ತಿರಲಿಲ್ಲ. ಭೂಮಿ ಎಲ್ಲಾ ಸುತ್ತುತ್ತಿರುವ ಅನುಭವ. ಅದೇನೋ ಕಣ್ಣುಗಳಲ್ಲಿ ಒಂದು ಹನಿ ನೀರು ಕೂಡ ಬರಲಿಲ್ಲ. ಶಂಕರ್ ಮಾವ ಸ್ವಲ್ಪ ಸಮಾಧಾನಿಸಿದ ಬಳಿಕವೇ ವಾಸ್ತವತೆಗೆ ಮರಳಿದ್ದು. ಅವರ ಭುಜದ ಮೇಲೆ ಹಣೆಯನ್ನಿಟ್ಟು ಎಷ್ಟು ಅತ್ತಿದ್ದೇನೋ ಗೊತ್ತಿಲ್ಲ. ಒಂದೇ ದಿನದಲ್ಲಿ ಅವರೆಲ್ಲರ ಚಿತೆಯೊಡನೆ ಮನೆಯ ಸಂತೋಷವೆಲ್ಲಾ ಭಸ್ಮವಾಗಿತ್ತು ಮನೆಯೆಲ್ಲಾ ಭೂತ ಬಂಗಲೆಯಂತೆ ಬಿಕೋ ಎನ್ನುತ್ತಿತ್ತು. ಅಂದು ಸಂಜೆ ಶಂಕರ್ ಮಾವ ನನ್ನ ಹತ್ತಿರ ಕೂತು ನೋಡಪ್ಪಾ.. ಯಾರೋ ನಮ್ಮ ಮನೆಗೆ ಬತರ್ಾರೆ ನಾನು ಹೋಗಬೇಕಿದೆ. ಆದರೆ ನೀನು ಹೆದರಬೇಡ ನಾನಿದ್ದೇನೆ ನೀ ಧೈರ್ಯವಾಗಿರು ಎಂದರು. ಸರಿ ಎಂದು ತಲೆಯಾಡಿಸಿದೆ. ಅವರು ಮೆಟ್ಟಿಲಿಳಿದು ಹೊರ ನಡೆಯುತ್ತಿದ್ದಂತೆ. ಮಾವ ಎಂದೆ...ಅವರು ಕಣ್ಸನ್ನೆಯಲ್ಲೇ ಏನು ಅಂತ ಕೇಲಿದರು.. ದಯವಿಟ್ಟು ಭುವಿಯನ್ನು ಬರಲು ಹೇಳಿ ನನಗೆ ಅವಳ ಅಗತ್ಯವಿದೆ ಅಂತ ಬೇಡಿಕೊಂಡೆ. ಅವರು ಸರಿನಪ್ಪ ನಾಳೆ ಬರ್ತಾಳೆ ಅಂತ ಹೇಳಿ ಹೊರಟು ಹೋದ್ರು. ಇನ್ನು ನಮ್ಮ ಚಿಕ್ಕಪ್ಪ ಅವರಂತೂ ರಜೆ ಇಲ್ಲ ಅಂತ ಅಂದೇ ಹೊರಟರು. ಉಳಿದವನು ನಾನು ಮಾತ್ರ. ದಿನ ಮೂರು ಕಳೆದರೂ ಭುವಿ ಬರಲೇ ಇಲ್ಲ. ಮಾವ ಕೂಡಾ ಬರಲೇ ಇಲ್ಲ. ಫೋನ್ ಸ್ವಿಚ್ ಆಫ್. ಆ ಮನೆಯಲ್ಲಿ ಒಂಟಿಯಾಗಿ ದಿನ ಕಳೆಯುವುದು ಬಹಳ ಕಷ್ಟವಾಗತೊಡಗಿತ್ತು. ಎಲ್ಲೆಲ್ಲೂ ನೀರವ ಮೌನ... ಕೆಲವೊಮ್ಮೆ ಅಮ್ಮ ಅಡುಗೆ ಮನೆಯಿಂದ ಕರೆದಂತಾಗುವುದು...ಅಣ್ಣ ಮಾತನಾಡಿದಂತಾಗುವುದು. ಒಟ್ಟಿನಲ್ಲಿ ಮನಸ್ಸಿಗೆ ತುಕ್ಕು ಹಿಡಿದಿತ್ತು. ಅತ್ತ ನನ್ನ ಕಂಪನಿ ಕಡೆಯಿಂದ ಹೆಚ್ಆರ್ ಮ್ಯಾನೇಜರ್ ಕರೆ ಮಾಡಿ ನಾಳೆ ಕೆಲಸಕ್ಕೆ ಬಾ...ಇಲ್ಲಾ ಅಂದ್ರ ಮತ್ಯಾವತ್ತೂ ಬರಬೇಡಾ ಅಂತ ಖಡಕ್ ಆಗಿ ಹೇಳಿಬಿಟ್ಟರು. ನಾನಂತೂ ಬರಲ್ಲ ಸರ್. ಅಂತ ಹೇಳಿ ಕಾಲ್ ಕಟ್ ಮಾಡಿದೆ. ಊಟ ಮಾಡದೇ ವಾರವೇ ಕಳೆದಿತ್ತು ಇನ್ನು ಕೆಲಸ ಮಾಡುವುದೆಲ್ಲಿ ಬಂತು. ಇತ್ತೀಚಿಗಂತು ಭುವಿಯ ಮೆಸೆಜ್, ಕಾಲ್ ಯಾವುದೂ ಇಲ್ಲದೇ ಅವಳ ನೆನಪು ಮತ್ತಷ್ಟು ಕಾಡುತ್ತಿತ್ತು. ಮನಸ್ಸಿನ ದುಃಖವನ್ನು ಹೇಳಿಕೊಳ್ಳೋಣವೆಂದರೆ ಅಮ್ಮ ಇಲ್ಲ..ಅಪ್ಪ ಇಲ್ಲ..ಕೊನೆಯದಾಗಿ ಅಣ್ಣಂದಿರೂ ಇಲ್ಲ. ಉಳಿದದ್ದು ಭುವಿ ಮಾತ್ರ. ಅವಳು ಯಾಕೆ ಹೀಗೆ ಮಾಡುತ್ತಿದ್ದಾಳೆ ಅಂತನೇ ತಿಳಿಯಲಿಲ್ಲ. ಪ್ರತೀ ಕಷ್ಟ ಸುಖದಲ್ಲೂ ನನ್ನೊಡನೆ ಜತೆಯಾಗಿರುತ್ತಿದ್ದ ಅವಳು ಇಂತಹ ದುರ್ಘಟನೆ ನಡೆದಾಗಲೂ ಈ ರೀತಿ ಯಾಕೆ ಮೌನವಾಗಿದ್ದಾಳೆ ಅಂತಾನೇ ತಿಳಿಯಲಿಲ್ಲ. ಯಾಕೋ ಆತಂಕ ಶುರುವಾಗಿಬಿಟ್ಟಿತ್ತು...ಅದೇ ಚಿಂತೆ ಪ್ರತೀ ಕ್ಷಣ ಕಾಡತೊಡಗಿತು.
ಹೀಗಿರಬಹುದು...ಹಾಗಿರಬಹುದು ಅಂತ ಮನಸ್ಸು ಕಥೆ ಹೆಣೆಯಲು ಪ್ರಾರಂಭಿಸಿತ್ತು. ಅಪ್ಪ, ಅಮ್ಮ, ಅಣ್ಣಂದಿರು ಯಾರೂ ಮರಳಿ ಬರುವುದಿಲ್ಲ ಎಂಬ ವಾಸ್ತವ ನಿಧಾನವಾಗಿ ಅರಿವಾಗತೊಡಗಿತ್ತು. ಆದರೆ ನನ್ನ ಪ್ರೀತಿಯ ಭುವಿ...! ಮತ್ತೆ ಮನಸ್ಸು ಹುಚ್ಚನಂತೆ ವತರ್ಿಸತೊಡಗಿತ್ತು. ನಮ್ಮ ನಂದಗೋಕುಲದಂತಹ ಮನೆ ಸ್ಮಶಾನವಾಗಿ ಅವತ್ತಿಗೆ 15 ದಿನಗಳಾಗಿತ್ತು. ಅದೇಕೋ ಇನ್ನೂ ಇಲ್ಲೇ ಕೂತರೆ ಹುಚ್ಚನಾಗುತ್ತೇನೆಂಬ ಭಯ ಕಾಡತೊಡಗಿತು. ಕೂಡಲೇ ಭುವಿಯ ಮನೆ ಕಡೆಗೆ ಹೊರಟೆ. 15 ದಿನಗಳ ಬಳಿಕ ಮನೆಯಿಂದ ಹೊರ ಬಂದದ್ದರಿಂದಲೂ ಏನೋ..ಹೊರ ಜಗತ್ತೆಲ್ಲಾ ವಿಚಿತ್ರವಾಗಿ ಕಾಣತೊಡಗಿತ್ತು. ಬೈಕ್ ನ ಸೈಡ್ ಮಿರರ್ ನಲ್ಲಿ ಮುಖ ನೋಡಿದರೆ ದಟ್ಟವಾದ ಗಡ್ಡ ಬೆಳೆದು ನನಗೇ ಗುರುತು ಸಿಗದಂತಾಗಿತ್ತು. ಅತ್ತು ಅತ್ತು ಕಣ್ಣುಗಳು ಸಣ್ಣದಾಗಿದ್ದವು.
ಭುವಿಯ ಮನೆಗೆ ತಲುಪುತ್ತಿದ್ದಂತೆ ದೂರದಲ್ಲಿ ಬರುತ್ತಿದ್ದ ನನ್ನನ್ನು ನೋಡಿ ಶಂಕರ ಮಾವ...ಗೇಟ್ ವರೆಗೂ ಬಂದು ನಿಂತಿದ್ದರು. ಗೇಟ್ ಬಳಿ ಬೈಕ್ ನಿಲ್ಲಿಸಿ ಅವರನ್ನು ಮಾತನಾಡಿಸಲು ಮುಂದಾದೆ. ಆದರೆ ಅವರು ಬಾ ಎಂಬ ಸಂಜ್ಞೆ ಮಾಡುತ್ತಾ... ಮೌನವಾಗಿಯೇ ಮನೆ ಒಳಗೆ ನಡೆದರು. ನಾನು ಅವರನ್ನು ಹಿಂಬಾಲಿಸಿದೆ. ಮನೆ ಒಳಗೆ ಹೋದವನು ಸೋಫಾದ ಮೇಲೆ ಕುಳಿತುಕೊಂಡು ಅತ್ತಿತ್ತ ಕಣ್ಣು ಹಾಯಿಸಿದೆ. ಅಷ್ಟರಲ್ಲಿ ಮಾವ ಮೌನ ಮುರಿದು ಭುವಿಯನ್ನು ಹುಡುಕುತ್ತಿದ್ದೀಯಾ ಅಂತ ಕೇಳದರು. ನಾನು ಬೇಸರದಿಂದಲೇ ಹೂಂ ಅಂದೆ.
ಅವರು ದೀರ್ಘವಾದ ಉಸಿರು ತೆಗೆಯುತ್ತಾ...ಮುಂದುಗಡೆ ಇದ್ದ ರೂಮಿನ ಬಾಗಿಲು ತೆಗೆದರು.
ನೋಡು ನಿನ್ನ ಭುವಿಯನ್ನು ಅಂದರು... ಅವಳತ್ತ ನೋಡುತ್ತಲೇ ಭಾವನೆಗಳೆಲ್ಲವೂ ಸ್ಥಿಮಿತಕಳೆದುಕೊಂಡಿದ್ದವು. ದುಃಖ ಉಮ್ಮಳಿಸಿ ಬರುತ್ತಿತ್ತು...ಅಂದು ನಮ್ಮ ಮನೆಯವರೆಲ್ಲರೂ ಆಕ್ಸಿಡೆಂಟ್ ನಲ್ಲಿ ಸತ್ತಿದ್ದಾರೆ ಅಂತ ತಿಳಿದು ಒಬ್ಬಂಟಿಯಾದ ನನ್ನನ್ನು ಸಂತೈಸುವುದಕ್ಕಾಗಿ ಬೆಂಗಳೂರಿನಿಂದ ಹೊರಟವಟಳಿಗೆ ಬಸ್ ಆಕ್ಸಿಡೆಂಟ್ ಆಗಿ ಪ್ಯಾರಾಲಿಸಿಸ್ ಆಗಿದೆ ಬದುಕಿ ಉಳಿದದ್ದೇ ಹೆಚ್ಚು ಅಂತ ಶಾಂತ ಅತ್ತೆ ಎಲ್ಲವನ್ನು ವಿವರಿಸಿದರು. ಅವಳ ದೇಹದ ಅರ್ಧ ಭಾಗವಂತೂ ಸಂಪೂರ್ಣವಾಗಿ ನಿಷ್ಕ್ರೀಯವಾಗಿತ್ತು. ಭುವಿ ಅಂತೂ ನನ್ನನ್ನು ನೋಡಿ ಎದ್ದು ಬರುವುದಕ್ಕೆ ಪ್ರಯತ್ನಿಸುತ್ತಿದ್ದಳು. ನೇರವಾಗಿ ಅವಳ ಬಳಿ ಹೋಗಿ ಗಟ್ಟಿಯಾಗಿ ತಬ್ಬಿಕೊಂಡೆ. ಲೇ.. ನಾನಿದ್ದೇನೆ ಕಣೆ ತರಲೆ..ನಿನಗೇನೂ ಆಗಲ್ಲ. ಈಗಾಗಲೇ ಎಲ್ಲವನ್ನು ಕಳೆದುಕೊಂಡಿದ್ದೇನೆ. ನನಗಿರುವ ಒಂದೇ ಒಂದು ಭರವಸೆ ಅಂದ್ರೆ ನೀನು. ಒಳ್ಳೆ ಡಾಕ್ಟರ್ ಬಳಿ ಹೋಗೋಣ ಎಲ್ಲವೂ ಸರಿ ಆಗುತ್ತೆ ಅಂತ ಸಮಾಧಾನಿಸಿದೆ. ಅವಳಲ್ಲಿ ಮಾತನಾಡಿದೊಡನೆ ಇಷ್ಟು ದಿನ ಕಾಡುತ್ತಿದ್ದ ಅಮ್ಮನ ನೆನಪು, ಏಕಾಂತ ಎಲ್ಲರೂ ಅರೆಕ್ಷಣ ಪರದೆಯ ಹಿಂದೆ ಸರಿದಿತ್ತು.
ಅಂದಿನಿಂದ ಭುವಿಯ ಆರೈಕೆಯೇ ನನ್ನ ಬದುಕಾಗಿಬಿಟ್ಟಿತ್ತು. 8 ವರ್ಷಗಳ ಕಾಲ ಅದೇಷ್ಟೋ ಪ್ರಖ್ಯಾತ ವೈದ್ಯರು ಬಂದರೂ ಏನೂ ಪ್ರಯೋಜನವಾಗಲಿಲ್ಲ... ಭುವಿ ಚೇತರಿಸಿಕೊಳ್ಳಲೇ ಇಲ್ಲ... ಅದೊಂದು ದಿನ ಎಂದಿನಂತೆ ಅವಳಿಗೆ ಊಟ ಮಾಡಿಸಿ.. ಹಣೆಗೆ ಮುತ್ತಿಡುತ್ತಾ ಭರವಸೆಯ ಮಾತುಗಳನ್ನಾಡುತ್ತಾ ಮಲಗಿಸಿ ಇನ್ನೇನು ಎದ್ದು ಹೊರನಡೆಯಬೇಕೆನ್ನುವಷ್ಟರಲ್ಲಿ ನೀ ಎಲ್ಲೂ ಹೋಗಬೇಡ ಕಣೋ... ಇಲ್ಲೇ ಹತ್ತಿರ ಕುಳಿತುಕೊ ಎಂದು ಭುವಿ ಗೊದ್ದೆ ಸ್ವರದಲ್ಲಿ ಹೇಳಿದಳು. ಅಯ್ತು ಕಣೆ... ಅಂತ ಅವಳ ತಲೆ ಸವರುತ್ತಾ ಅಲ್ಲೇ ಕುಳಿತೆ. ಅವಳು ನನ್ನನ್ನು ಬಿಟ್ಟು ಹೋಗಬೇಡಾ ಕಣೋ ಅಂತ ಹೇಳುತ್ತಲೇ..ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನನಗೆ ಕುಳಿತಲ್ಲಿಗೇ ನಿದ್ದೆ ಬಂದದ್ದು ಗೊತ್ತೇ ಆಗಲಿಲ್ಲ. ಒಂದರ್ಧ ಗಂಟೆ ಕಳೆದಿರಬಹುದು ಒಮ್ಮೆಲೆ ಎಚ್ಚರವಾಯಿತು. ಭುವಿ ಮಾತ್ರ ಹಾಗೆಯೇ ಮಲಗಿದ್ದಳು. ಆದರೆ ಅವಳ ಕೈಗಳೆಲ್ಲಾ ತಂಪಾಗಿದ್ದವೂ...
ಅಂದಿಗೆ ನನ್ನ ಜೀವನದ ಕೊನೇ ಭರವಸೆಯೂ ಕಮರಿಹೋಗಿತ್ತು...
ಅಷ್ಟರಲ್ಲಿ ಯಾರೋ ಕರೆದಂತಾಯಿತು. ಹೋ ಬೀಚ್ ನಲ್ಲಿ ಇದ್ದೇನಲ್ಲಾ... ಛೇ.. ಇನ್ನೇನು ಸೂರ್ಯ ಮುಳುಗುವ ಹೊತ್ತಾಯ್ತು...ಮಾವನಿಗೆ ಮಾತ್ರೆ ಕೊಡಬೇಕಿದೆ ಅಂತ ನೆನಪಾಗಿ ಭಾರವಾದ ಮನಸ್ಸಿನಿಂದಲೇ ಬೈಕ್ ಹತ್ತಿದೆ.
ಇಂತಿ,
ಕೆ.ನಾ.ಗೋರೆ
ಮಂಗಳವಾರ, ಜೂನ್ 16, 2015
ಶುಕ್ರವಾರ, ಏಪ್ರಿಲ್ 10, 2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)






















