ಮಂಗಳವಾರ, ಮೇ 13, 2014

ಬೇಲಿ ದಾಟಿದ ಬದುಕು


ನೇರ ಪರಿಚಯವಿಲ್ಲದ ಪ್ರಕಾಶಣ್ಣ 'ಇಟ್ಟಿಗೆ ಸಿಮೆಂಟ್'ನ ಮೂಲಕ ಕಥೆಗೆ ಅಡಿಪಾಯ ಹಾಕಿದ್ದರೆ      http://ittigecement.blogspot.in/2014/04/blog-post.html ನನ್ನ ನೆಚ್ಚಿನ ಕಥೆಗಾರ ದಿನಕರ ಮೊಗೇರ ರವರು ಈ ಕಥೆಯನ್ನು http://dinakarmoger.blogspot.in/2014/04/blog-post_14.html  'ಮೂಕ ಮನದ ಮಾತು'ಗಳಲ್ಲಿ ಮುಂದುವರೆಸಿ ಅಂತ್ಯಕಾಣಿಸದೇ ನಮಗೊಂದು ಮುಕ್ತ ಅವಕಾಶ ನೀಡಿದ್ದಾರೆ. ಆ ಕಥೆಯನ್ನು 'ಮನದೊಳಗಣ ಮಾತಿನಮಂಚ'ದ ಮೂಲಕ ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದೇನೆ.



    ಅವಸರ ಅವಸರದಲ್ಲಿ ಮನೆ ಬಾಗಿಲಿಗೆ ಬೀಗ ಹಾಕಿ ಗೇಟ್ವರೆಗೆ ತಲುಪುವಷ್ಟರಲ್ಲಿ ಹೋ... Purse ಮರೆತೇ ಹೋಯಿತಲ್ಲಾ... ಎಂದು ನೆನಪಾಯಿತು. ಹೌದು ಆತನ ಆಕರ್ಷಣೆ ಜಗತ್ತನ್ನೇ ಮರೆಸುವಂತಹದ್ದು. ಇನ್ನು Purse ಏನು ಮಹಾ ! ಎಂದು ಮನಸ್ಸಿನಲ್ಲೇ ನಾಚಿಕೆಯ ನಗು ಬಂತು. ಹೀಗೆ ಒಳ ಹೊಕ್ಕವಳೇ Purse ಗಾಗಿ ತಡಕಾಡಿದೆ. ಇತ್ತೀಚೆಗೆ ಮನೆಯಿಂದ ಹೊರ ಹೋಗದೇ ಕೆಲ ದಿನಗಳೇ ಸಂದಿದ್ದರಿಂದ Purse ಅಜ್ಞಾತವಾಗಿತ್ತು. ಆದರೂ ಕೊನೆಗೂ ಗಾಡ್ರೇಜ್ ಮೂಲೆಯೊಂದರಲ್ಲಿ ಸಿಕ್ಕಿದಾಗ ಅಬ್ಬಾ ಎನಿಸಿತು. ಇನ್ನು ತಡಮಾಡಬಾರದೆಂದು ಹೊರಡುವಷ್ಟರಲ್ಲಿ ಅದೇಕೋ ಲಿಪ್ಸ್ಟಿಕ್ ಮಾಸಿ ಹೋಗಿದೆಯಾ ಅಂತ ನೋಡುವ ಮನಸ್ಸಾಯಿತು. ಕನ್ನಡಿ ಮುಂದೆ ನಿಂತವಳಿಗೆ ಇನ್ನೊಂದು ಬಾಜಿನಲ್ಲಿ ಆತನೇ ನಿಂತು! 'ಎಲ್ಲಾ ಸರಿಯಾಗಿದೆ ಕಣೆ... ಬೇಗ ಬಾ...' ಎಂದಂತಾಯಿತು. 'ನಾನು ಮಾತು ಮತ್ತೆ ನಾಚಿಕೊಂಡಿದ್ದೆ'.ಕೂಡಲೇ ಮನೆಗೆ ಬೀಗ ಹಾಕಿ ಹತ್ತಿರದ ಬಸ್ ಸ್ಟ್ಯಾಂಡ್ಗೆ ತಲುಪಿದೆ. ಕೆಲವೇ ಕ್ಷಣಗಳಲ್ಲಿ ಬಸ್ಸು ಬರುವುದಿದ್ದರೂ 'ಹದಗೊಂಡ ಮನಸ್ಸು ಹಾಗೂ ದೇಹ ಕಾಯುವುದಕ್ಕೆ ಸಿದ್ಧವಿರಲಿಲ್ಲ. ಎಲ್ಲಾದರೂ ರಿಕ್ಷಾ ಕಾಣಿಸುತ್ತಿದೆಯೇ ಅಂತ ಕತ್ತು ಇಣುಕಿಸಿ ಅತ್ತ ಇತ್ತ ನೋಡಿದೆ. ಉಹೂಂ! ಹಾಳಾದ್ದು ಯಾವಾಗ್ಲೂ ಬೇಡಾ ಬೇಡ ಅಂದರೂ ರಿಕ್ಷಾದವರು ನಿಲ್ಲಿಸಿ ಬರ್ತಿರಾ ಮೇಡಂ, ಬಸ್ಸಿಗಿಂತ ಮುಂಚೆ ತಪುಪ್ತಿರಾ ಅಂತ ಮಸ್ಕಾ ಹೊಡೆಯುತ್ತಿದ್ದರು. ಇವತ್ತು ಎಲ್ಲಿ ಸತ್ತು ಹೋಗಿದ್ದಾರೋ ಎನಿಸಿತು. ಎಂದೂ ಸಿಟ್ಟು ಮಾಡಿಕೊಳ್ಳದವಳಿಗೆ ಇಂದೇಕೋ ಮನಸ್ಸು ನಿಯಂತ್ರಣ ಕಳೆದುಕೊಂಡಿತ್ತು. ಇರುವೆಗಳ ಸಾಲಿನ ಮೇಲೆ ಕಾಲಿಟ್ಟು ನಿಂತಂತಾಗಿತ್ತು ನನ್ನ ಸ್ಥಿತಿ. ಅಷ್ಟರಲ್ಲೇ ದೂರದಲ್ಲಿ ಬಸ್ಸು ಬರುವುದು ಕಾಣಿಸಿತು. ಅಯ್ಯೋ ಬೇಗ ಬಾರಪ್ಪ ಅಂತ ಮನಸ್ಸಿನಲ್ಲೇ ಗೊಣಗಿದೆ. ಬಸ್ಸು ಬಸ್ಸ್ಟ್ಯಾಂಡಿಗೆ ತಲುಪಿದ್ದೇ ತಡ ಪೂರ್ತಿಯಾಗಿ ನಿಲ್ಲುವ ಮುಂಚೆಯೇ ಗಂಡಸರಂತೆ ಹಾರಿ ಹತ್ತಿ ಕುಳಿತಿದ್ದೆ. ಯಾರು ನೋಡಿ ನಕ್ಕರೋ ದೇವರೇ ಬಲ್ಲ.ಏನು ಕಾಕತಾಳಿಯವೋ... ಅಂದು ನಾನು ಮತ್ತು ಅವನು ಕುಳಿತ ಅದೇ ಎಡಬದಿಯ ಮೂರನೇ ಸೀಟಿನಲ್ಲಿ ಕುಳಿತಿದ್ದೆ. ನೆನಪುಗಳು ಮತ್ತೆ ಮತ್ತೆ ಮೇಲೇರಿ ಬರತೊಡಗಿದವು. ಅವನು ನನ್ನ ಬಳಿಯಲ್ಲೇ ಇದ್ದಾನೇನೋ... ಅದೇ ದಿನ ಮತ್ತೆ ಮರಳಿ ಬಂದಿದೆಯೇನೋ ಅನಿಸುತ್ತಿತ್ತು. ವಾಸ್ತವವಾಗಿ ಪಕ್ಕದ ಸೀಟು ಖಾಲಿ ಇದ್ದರೂ ಬಸ್ಸು ತಿರುವು ಮುರುವುಗಳಲ್ಲಿ ಸಾಗುತ್ತಿರಲು ಅಂದಿನಂತೆಯೇ 'ಅವನ ಬೆಚ್ಚಗಿನ ಮೈ ಸೋಕಿ ಕೊಂಚ ಕೊಂಚವೇ ನಾಚಿ ಕರಗಿ ಹೋಗುತ್ತಿದ್ದೇನೋ' ಎನಿಸುತ್ತಿತ್ತು. ನಾನು ನನ್ನಷ್ಟಕ್ಕೆ ನಾಚಿಕೊಳ್ಳುವುದನ್ನು ನೋಡಿ ಟಿಕೇಟ್ ಪಡೆಯಲು ಬಂದ ಕಂಡಕ್ಟರ್ ವಿಚಿತ್ರ ಕಾಮುಖ ದೃಷ್ಟಿಯಲ್ಲಿ ನೋಡುತ್ತಿದ್ದ. ಆದರೂ ಕಡೇ ಪಕ್ಷ ಮರಳಿ ದುರುಗುಟ್ಟಿ ನೋಡುವ ಮನಸ್ಸೂ ಆಗಲಿಲ್ಲ. ಬಹುಷಃ ನಾನು ಆ ರಸಮಯ ಇತಿಹಾಸದಿಂದ ಹೊರಬರಲು ಬಯಸುತ್ತಿರಲಿಲ್ಲವೇನೋ...!ನಾನು ನನ್ನದೇ ಕಲ್ಪನಾ ಲೋಕದಲ್ಲಿ ಅವನ ಬೆಚ್ಚನೆಯ ಭುಜದ ಮೇಲೆ ತಲೆಯಿರಿಸಿ ನಾಚಿಕೊಂಡಿದ್ದೆ. ಅಷ್ಟರಲ್ಲೇ ತೂರಿಬಂದ ಬಸ್ನ ಕರ್ಕಶ ಹಾರ್ನ್ ನಿದ್ದೆಯಿಂದ ಎಬ್ಬಿಸಿದಂತಾಯಿತು.  ಕೈಯಲ್ಲಿ ಹಿಡಿದಿದ್ದ ಮೊಬೈಲ್ ಕೈ ಜಾರಿ ಕೆಳಗೆ ಬಿದ್ದಿತ್ತು. ಕೂಡಲೇ ಅದನ್ನು ಎತ್ತಿಕೊಂಡವಳಿಗೆ ಮೊಬೈಲ್ ಸ್ಕ್ರೀನ್ ಸೇವರ್ನಲ್ಲಿದ್ದ ಗಂಡನ ನಗು ಮೊಗ ಬೆಚ್ಚಿ ಬಿಳಿಸಿತ್ತು. 'ಚಳಿಗಾಲದ ಆ ತಂಪು ಗಾಳಿಯಲ್ಲೂ ಮೈ ಬೆವರತೊಡಗಿತು'. ಅಯ್ಯೋ... ಶಿವನೇ...! ನನಗೇನು ಬಂತು ಹುಚ್ಚು! ಅಂದು ಮದುವೆಗಿಂತ ಮುಂಚೆ ಆ ಗೆಳೆಯ ಮತ್ತು ನಾನು ಒಂದೇ ರೂಮಿನಲ್ಲಿ ರಾತ್ರಿ ಪೂರ್ತಿ ಕಳೆದಿದ್ದೆವು. ಆದರೂ ಅಂದು ಆತನಲ್ಲಿ ಸಂಪೂರ್ಣವಾಗಿ ಲೀನಳಾಗುವ ಮುಕ್ತ ಅವಕಾಶವಿದ್ದರೂ 'ಮೈ ಮನಸ್ಸು ದೂರದಲ್ಲಿರಿಸಿಕೊಂಡಿದ್ದೆ'. ಒಂದು ವೇಳೆ ಅಂದು ಬೇಲಿ ದಾಟಿದ್ದರೂ ಕೂಡಾ... ಬಾಳೇನು ಹಾಳಾಗುತ್ತಿರಲಿಲ್ಲ. ಹೌದು. ಖಂಡಿತ... ಆತ ಎಂದಿಗೂ ನನ್ನ ಕೈ ಬಿಡದೇ ಹೂವಿನಂತೆ ನೋಡಿಕೊಳ್ಳುತ್ತಿದ್ದ. ಅಷ್ಟು ನಂಬಿಕಸ್ತ ಸ್ನೇಹ ಜೀವಿ ಆತ. ಅದೆಲ್ಲವೂ ಗೊತ್ತಿದ್ದೂ ಕೂಡಾ ನನ್ನ ಮೈ ಮನಸ್ಸುಗಳು ನನ್ನ ಸುಪ್ಪತ್ತಿಗೆಯಲ್ಲೇ ಇರಿಸಿಕೊಂಡಿದ್ದೆ. ಅವನೂ ಕೂಡಾ! ಆದರೆ ಇಂದು! ನಾನೊಬ್ಬ ಗೃಹಿಣಿ. ಪ್ರೀತಿಯಿಂದ ನೋಡಿಕೊಳ್ಳುವ ಪತಿ ಇರುವಾಗ ನಾನು ಇತಿಹಾಸದ ಅವನ ಪ್ರೀತಿಗೆ, ಬಿಸಿ ಮೈಗೆ ಕರಗಿಹೋದೆನಾ...!ಛೇ... ನನ್ನ ಬಗ್ಗೆ ನನಗೇ ಮುಜುಗರವೆನಿಸಿತು. ಕೂಡಲೇ ಬಸ್ ನಿಲ್ಲಿಸುವಂತೆ ಕಂಡೆಕ್ಟರ್ ಗೆ  ಸಂಜ್ಞೆ ಮಾಡಿದೆ. ಬಸ್ಸು ವೇಗ ಕಡಿಮೆಗೊಳಿಸುತ್ತಿದ್ದಂತೆ ಗಂಡಸರಂತೆ ಅವಸರ ಅವಸರದಲ್ಲಿ ಬಸ್ ಇಳಿದೆ. ನಾಚಿಕೆಯಿಂದ ಕಂಗೊಳಿಸುತ್ತಿದ್ದ ನನ್ನ ಮುಖ ಆತಂಕದಿಂದ ಮುದುಡಿ ಹೋಗಿತ್ತು. ಬಸ್ನಿಂದ ಇಳಿದವಳಿಗೆ ಏನು ಮಾಡಬೇಕು ಎಂದೇ ತೋಚಲಿಲ್ಲ...ಮೆದುಳು ಯಾವ ಸಂದೇಶವನ್ನೂ ನೀಡುತ್ತಿರಲಿಲ್ಲ. ಒಂದೆರಡು ನಿಮಿಷ ಅಲ್ಲೇ ನಿಂತು ಎನನ್ನೋ ಯೋಚಿಸತೊಡಗಿದೆ. ಅದಾಗಲೇ ಅವನ ಮಿಸ್ ಕಾಲ್ ಬಂದಿತ್ತು...! ನಿನ್ನೆಯಷ್ಟೇ ಹಳೇಯ ಫೋಟೊಗಳನ್ನು ತಡಕಾಡಿ ಅವನ ಒಂದು ಸುಂದರ ಫೂಟೊವನ್ನು ಅವನ ಮೊಬೈಲ್ ನಂಬರ್ ಜೊತೆ ಸೇರಿಸಿದ್ದೆ. ಅದು ಇಂದು ಮೊಬೈಲ್ ಸ್ಕ್ರೀನ್ನಲ್ಲಿ ಎದ್ದು ಕಾಣುತ್ತಿತ್ತು. ಅವನ ಫೂಟೋ ನೋಡಿದವಳಿಗೆ ಎಲ್ಲವೂ ಗೊತ್ತಿದ್ದರೂ ಅವನ ಆಕರ್ಷಣೆ ಮತ್ತೆ ಅವನೆಡೆಗೆ ಬಂಧಿಯಾಗಿಸಿ ಬಿಟ್ಟಿತ್ತು.ನಿನ್ನ ನಾಚುವ ಮುಖ ನೋಡಿ ತುಂಬಾ ದಿನಗಳಾಗಿವೆ ಎನ್ನುವ ಅವನ ಮಾತು ಮತ್ತೆ ಬಸ್ ಹತ್ತುವಂತೆ ಮಾಡಿತು. 


ಕೆ. ನಾ. ಗೋರೆ

ಬುಧವಾರ, ಮೇ 7, 2014

ಕೊನೇ ಕೊಂಡಿ ಇಂದೇ ಕಳಚಬಾರದೇ...!





ಸಂದ್ಯೆಯಂಗಳದಿ ಬಿದ್ದ ಚೆಂಡು http://sandhyeyangaladi.blogspot.in/2014/03/blog-post.html ಅದ್ಹೇಗೋ ನನ್ನಂಗಳದಿ ಬಿದ್ದಾಗ ಎಲ್ಲೇಲ್ಲೂ ಧೂಳು ಎದ್ದ ಅಹಿತಕರ ಅನುಭವ... ಹೌದು ಆ ಕೊಂಡಿ ತಪ್ಪದ ಗೆಜ್ಜೆಗೂ ನನಗೂ ಬಹಳ ಆತ್ಮೀಯ ಸಂಬಂಧ.ಅಲ್ಲಿ ಆಕೆಯ ಪಾಲಿನ ನೋವು ಇಲ್ಲಿ ನನ್ನ ಪಾಲಿಗೆ(ದುರಾದೃಷ್ಟವಾಗಿ)ಒದಗಿ ಬಂದಿದೆ. ಅಂಗಳದ ಚೌಕಟ್ಟು ಮಾತ್ರ ಭಿನ್ನವಷ್ಟೇ!ಅಲ್ಲಿ ಎಲ್ಲವೂ ಮುಗಿದಿದ್ದರೆ ಇಲ್ಲಿ ಎಲ್ಲವೂ ಅರೆಜೀವ! ಸಂಭಂದಗಳೇ ಇಲ್ಲವೇ ಎಂದರೆ ಇವೆ !..ಹೋ...ಇವೆಯಾ ಎಂದರೆ ಇಲ್ಲ.!

ಒಂದು ಸಂಜೆ ನನ್ನ ಜೀವನದಲ್ಲಿ ಮರೆಯಲಾಗದ ಅದೇ ಸ್ಥಳದಲ್ಲಿ ಒಂಟಿಯಾಗಿ ಕೂತು ಶೂನ್ಯದಲ್ಲಿ ನೋಡುತ್ತಿದ್ದವನಿಗೆ ಮೊಬೈಲ್ನಲ್ಲಿ ಬಂದ ಒಂದು ನೋಟಿಫಿಕೇಶನ್ ಸಂದ್ಯೆಯಂಗಳದ ಕೊಂಡಿ ತಪ್ಪಿದ ಗೆಜ್ಜೆಯತ್ತ ಎಳೆದೊಯ್ದಿತ್ತು. ಕಥೆಗೂ ನನಗೂ ವಿಚಿತ್ರ ನಂಟಿದೆ ಎನಿಸಿತು... ಆ ಕೊಂಡಿ ತಪ್ಪಿದ ಗೆಜ್ಜೆ ಪದವೇ ನನಗೆ ಬಹಳ ಹತ್ತಿರವಾಗಿತ್ತು. ಓದುತ್ತಾ ಓದುತ್ತಾ ಕಥೆ ಅಂತ್ಯವಾಗುವ ಕಾಲಕ್ಕೆ ಕೈ ತನ್ನಿಂತಾನೆ ಪ್ಯಾಂಟಿನ ಎಡ ಕಿಸೆಯಲ್ಲಿದ್ದ ಆ ಗೆಜ್ಜೆಯತ್ತ ಸಾಗಿತ್ತು. ಮೊಬೈಲ್ ಬದಿಗಿಟ್ಟವನೇ ಆ ಗೆಜ್ಜೆಯನ್ನೇ ದಿಟ್ಟಿಸಿ ನೋಡಿದೆ...ಅದೇಕೋ ಮಂಜಾಗಿ ಕಾಣಿಸುತ್ತಿತ್ತು. ಕಣ್ಣುಗಳನ್ನೊಮ್ಮೆ ಮುಚ್ಚಿದೆ..ಕಣ್ಣಂಚಲಿ ಅಡಗಿದ್ದ ನೀರು ಮೆಲ್ಲನೆ ಕೆನ್ನೆಗಳ ಮೇಲಿಂದ ಜಾರಿತು...ಓ ಕಣ್ಣೀರು! ಇದ್ಯಾವಾಗ ಬಂದು ಎಂದು ಮನಸ್ಸಿನಲ್ಲೇ ಗೊಣಗಿದೆ. ಉತ್ತರಿಸಲು ಸುತ್ತ ಮುತ್ತ ಯಾರೂ ಇರಲಿಲ್ಲ. ಬದುಕಿನಲ್ಲೂ ಕೂಡಾ...!ಮತ್ತೆ ಗೆಜ್ಜೆ ನೋಡುತ್ತಾ ಕುಳಿತವನಿಗೆ ಅದರ ಮತ್ತೊಂದು ಕೊಂಡಿ ತಪ್ಪಿದ್ದು ತಿಳಿಯಿತು. ಕೂಡಲೇ ಕಿಸೆಯಲ್ಲಿ ತಡಕಾಡಿದೆ. ಉಹೂಂ ಇಲ್ಲ! ನಾನು ಹುಡುಕುತ್ತಿರುವುದಾದರೂ ಏನನ್ನು! ತನ್ನಿಚ್ಛೆಯಂತೆ ಕಳಚಿಕೊಂಡ ಕೊಂಡಿಯನ್ನಾ!  ಅದೇಕೋ ಅಸಜವಾದ ನಗು ಬಂದು. ಮನದ ಮೂಲೆಯಲ್ಲಿ ಹೇಳಲಾಗದ ದುಖಃವೂ! ಕಳೆದು ಹೋದ ಬದುಕಿನ ಪುಠಗಳು ತೆರೆದುಕೊಳ್ಳತೊಡಗಿದವು.ಆ ನಿನ್ನ ಸುಂದರ ಮುಖ, ಬದುಕು ಅರ್ಥಗಳೇ ಇಲ್ಲದೆ ಒದ್ದಾಡುತ್ತಿದ್ದಾಗ ನೀನು ತುಂಬಿದ ಧೈರ್ಯ, ಸದಾ ತೋರುತ್ತಿದ್ದ ಕಾಳಜಿ, ಪ್ರೀತಿ, ಕೆಲವೊಮ್ಮೆ ನೀನು ಅದು ಬೇಕು, ಇದು ಬೇಕು ಎಂದು ಸಣ್ಣ ಮಕ್ಕಳಂತೆ ಹಟ ಮಾಡುತ್ತಿದ್ದುದು, ನಾನು ನಿನಗೇ ಪ್ರೀತಿಯಿಂದ ನೀ ಕೇಳಿದ್ದೇಲ್ಲವನ್ನೂ ಮಾಡಿಕೊಡ್ಡುತ್ತಿದ್ದದ್ದು ಎಲ್ಲವೂ ಮಿಂಚಿನಂತೆ ನೆನೆಪಾಗತೊಡಗಿತ್ತು. ನಿಜ ಹೇಳಲಾ ನೀನು ಮಕ್ಕಳಂತೆ ಹಟ ಮಾಡುತ್ತಿದ್ದರೆ ನಿನ್ನ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿತ್ತು. ನಿನ್ನನ್ನು ತಬ್ಬಿ, ಮುದ್ದಿಸಬೇಕೆನಿಸುತ್ತಿತ್ತು.ಗೆಳತಿ ನೆನೆಪಿದೆಯಾ ನಾವು ಮೊದಲು ಇದೇ ಸ್ಥಳದಲ್ಲಿ ಭೇಟಿಯಾದ ಆ ಮಧುರ ಕ್ಷಣ! ಸಂಜೆ ಬಾನು ಕೆಂಪಾಗುವ ಘಳಿಗೆಯಲ್ಲಿ ಆ ಮುದ್ದು ಮುಖದ ನೀನು ನನಗಿಷ್ಟವಾದ ಕಪ್ಪು ಬಣ್ಣದ ಚೂಡಿದಾರ ತೊಟ್ಟು ಬಂದಿದ್ದೆ. ಅದು ನಮ್ಮ ಮೊದಲ ಭೇಟಿ. ನೀನು ಮದುಮಗಳಂತೆ ನಾಚಿಕೊಂಡಿದ್ದೆ, ಹತ್ತಿರ ಬಂದು ಕೂರುವುದಕ್ಕೂ ನಾಚಿಕೆ ಬಿಟ್ಟಿರಲಿಲ್ಲ ಕಡಗೆ ನಾನೇ ನಿನ್ನ ಪಕ್ಕದಲ್ಲಿ ಬಂದು ಕೂತಿದ್ದೆ. ಮೊದಲ ಸಲ ನಿನ್ನ ಆ ಕೋಮಲ ಕೈಗಳನ್ನು ಹಿಡಿದ ಅನುಭವ ಇನ್ನು ಹಸಿರಾಗೇ ಇದೆ ಕಣೆ...ನಿನ್ನ ಆ ಉದ್ದನೆಯ ಉಗುರುಗಳ ಬಗ್ಗೆ ನಾನು ತಮಾಷೆ ಮಾಡಿದ್ದು ಎಲ್ಲವೂ ಎಲ್ಲವೂ... ಅಂದು ನಿನ್ನ ಕೆನ್ನೆಗೆ ನೀಡಿದ ಮೊದಲ ಮುತ್ತು ನೆನೆಪಿರಬೇಕಲ್ಲಾ! ನನಗೆ ಗೊತ್ತು ನಿನ್ನಿಂದ ಅದನ್ನಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅಂದು ನಿನ್ನ ಮುಖದಲ್ಲಿ ಕಂಡ ಸಂಭ್ರಮವೇ ಇಂದಿಗೂ ವೇದನೆಗಳ ಗೂಡಾದ ಬದುಕಿನಲ್ಲೊಂದು ಪುಟ್ಟ ಆಸೆ ಉಳಿಸಿದ್ದು.ಮೊದ ಮೊದಲು ನೀನು ನನ್ನನ್ನು ಅಷ್ಟಾಗಿ ಪ್ರೀತಿಸುತ್ತಿದ್ದೆ ಎಂದು ನಂಬುವುದಕ್ಕೇ ಸಾಧ್ಯವಾಗಿರಲಿಲ್ಲ ಗೊತ್ತಾ! ನೀನು ನೀಡಿದ ಆ ಮೊದಲ Gift, ನನ್ನ birthdayಗೆ ನೀಡಿದ ಆ '5 Giftಳು', ಮುತ್ತುಗಳು ನಾನೇ ಪುಣ್ಯವಂತ ಎನಿಸುವಂತೆ ಮಾಡಿದ್ದವು.ನಿನಗೆ ಗೊತ್ತಲ್ವಾ ನೀನು ನನ್ನ ಜೀವನದಲ್ಲಿ ಬಂದ ಮೇಲೆ ನನ್ನ ವ್ಯಕ್ತಿತ್ವಕ್ಕೇ ಒಂದು ರೀತಿಯ ಕಳೆ ಬಂದಿತ್ತು. ಇಂದು ನಿನ್ನಿಂದಲೇ ಕಳೆಗುಂದಿ ನಶಿಸುತ್ತಿದೆಯೋ ಎಂಬ ಸಹಜ ಆತಂತ!ಅಂದು ನಿನ್ನ ಗೆಜ್ಜೆ ನನಗೆ ತುಂಬಾ ಇಷ್ಟವಾಯ್ತು ಎಂದಿದ್ದಕ್ಕೆ ಹಿಂದೆ ಮುಂದೆ ನೋಡದೇ ಒಂದನ್ನು ನೀಡಿದ್ದೆ. ಇದು ನಿನ್ನ ಬಳಿ ಇದ್ದರೆ ನಾನೇ ನಿನ್ನ ಬಳಿ ಇದ್ದಂತೆ ಅಂದಿದ್ದೆ. ಇತ್ತೀಚೆಗೆ ಕೇಳಿದಾಗೆಲ್ಲಾ ನನಗೆ ನೆನಪಿಲ್ಲ ಅನ್ನುತ್ತಿ. ಆದರೆ ನೀನು ಮರೆತಿಲ್ಲ ನನಗೆ ಗೊತ್ತು ಕಣೆ. ನಾನದನ್ನು ನಮ್ಮ ಪ್ರೀತಿಯ ದ್ಯೋತಕವೆಂದೇ ಭಾವಿಸಿದ್ದೇನೆ.ನಿನ್ನನ್ನು ಎಷ್ಟು ಹಚ್ಚಿಕೊಂಡಿದ್ದೇನೆ ಎಂದರೆ ನೀನು ಅದೆಲ್ಲೋ ದೂರದಿಂದ ಕರೆ ಮಾಡಿದಾಗ ನಿನ್ನ ಧ್ವನಿಯಲ್ಲಿ ಕೊಂಚ ಬದಲಾವಣೆಯಾದರೂ ಅರಿವಾಗುವಷ್ಟು!ಜೀವನವಿಡೀ ನನ್ನ ಜೊತೆಯೇ ಬದುಕುವ ಭರವಸೆ ಮೂಡಿಸಿದವಳು ಇಂದು ನನ್ನಿಂದ ಮಾರು ದೂರ ಸಾಗುತ್ತಿರುವೆ... ಎಲ್ಲಿಯವರೆಗೆ ಅಂದರೆ ಈ ಹಿಂದೆ ಇಷ್ಟವಾಗುತ್ತಿದ್ದ ನನ್ನ ಪ್ರೀತಿಯ ಮಾತುಗಳೇ Irritate ಅನಿಸತೊಡಗಿವೆ. ಏನೆನ್ನಬೇಕೋ ತಿಳಿಯುತ್ತಿಲ್ಲ. Convince ಮಾಡುವ ತಾಕತ್ತು ಉಲಿದಿಲ್ಲ.ನಾನಂತೂ ನಿನ್ನೊಂದಿಗೆ ಬಹಳ ದೂರ ಬಂದಾಗಿದೆ. ಹಿಂದೆ ನೋಡಿದರೆ ಬರೀ ಕತ್ತಲು ಮಾತ್ರ... ಮುಂದೆ ಸಾಗಬೇಕಷ್ಟೇ... ಅದೂ ನಿನ್ನ ಜತೆಯಾದರೆ ಮಾತ್ರ. ಇತ್ತೀಚೆಗೆ ನನಗೆ ನೀ ಪ್ರೀತಿಯಿಂದ ನೀಡಿದ ಗೆಜ್ಜೆಯೊಂದೇ ಆಸರೆಯಾಗಿದೆ. ಅದಿದ್ದರೆ ನೀನೆ ನನ್ನ ಬಳಿ ಇದ್ದ ಅನುಭವ. ಆದರೆ ಅದಕ್ಕೂ ನಾನು Bore ಆಗಿರಬೇಕು... ಅದೂ ನನ್ನನ್ನು ಬಿಟ್ಟು ಹೋಗುವ ಮನಸ್ಸು ಮಾಡಿರಬೇಕು, ಹಾಗಾಗಿಯೇ ಒಂದೊಂದು ಕೊಂಡಿಗಳೂ ಸರಣಿಯಾಗಿ ಕಳಚುತ್ತಿವೆ. ಅಂತೆಯೇ ನನ್ನ ಬದುಕಿನ ಒಂದೊಂದು ಕೊಂಡಿಯೂ...! ಕೊನೇ ಕೊಂಡಿ ಕಳಚುವ ಕಾಲ ಬಹುಷಃ ಬಹಳ ದೂರವಿಲ್ಲ. ಎಲ್ಲವೂ ಮುಗಿಯುವ ಮುನ್ನ ಜೋಡಿಸುವ ಅಧಿಕಾರ, ಅವಕಾಶ ಇರುವುದು ನಿನಗೆ ಮಾತ್ರ... ಈ ಮಾತನ್ನು ನೂರು ಬಾರಿ ಹೇಳಿದ್ದಿರಬೇಕು. ಕೊನೇ ಕೊಂಡಿ ಕಳಚುವವರೆಗೂ ಹೇಳುತ್ತಲೇ ಇರುತ್ತೇನೆ ಎನ್ನುವಷ್ಟರಲ್ಲಿ ಯಾವುದಕ್ಕೂ ಉತ್ತರಿಸದೆ ಅದೇಕೋ ಕಣ್ಣ ಮುಂದಿದ್ದವಳು ಮುಖ ತಿರುಗಿಸಿ ಮಾಯವಾಗಿಯೇ ಬಿಟ್ಟಳು. ಅಳುವೊಂದೆ ಜತೆಯಾಗಿತ್ತು.
ಅಷ್ಟಾಗಲೇ ಯಾರೋ ಕರೆದಂತಾಯಿತು. ಹಿಂದೆ ತಿರುಗಿ ನೋಡಿದೆ..ಎಲ್ಲೆಲ್ಲೂ ಕತ್ತಲೆ...ಯಾರೂ ಕಾಣಲಿಲ್ಲ, Watch ನೋಡಿದೆ 7.30 ಕಳೆದಿತ್ತು, ಹಾಗಾದರೆ ನಾನು ಇಷ್ಟು ಹೊತ್ತು ಅವಳ ಜತೆಗಿದ್ದದ್ದು, ಮಾತನಾಡಿದ್ದು ಎಲ್ಲಾ ಭಮೆಯಾ! ಇಲ್ಲಿ ಇಷ್ಟು ಹೊತ್ತು ಕ್ಕೂತಿದ್ದೇನಾ! ನನಗೇ ನಂಬಲಾಗಿಲ್ಲ ! ಮನಸ್ಸೇಕೋ ಭಾರವೆನಿಸುತ್ತಿತ್ತು. ಹೋ..7.30 ದಾಟಿದೆ ಇಷ್ಟು ಹೊತ್ತಿಗೆ ಅವಳ ಮೆಸೇಜ್ ಬರಬೇಕಾಗಿತ್ತಲ್ಲಾ ಅಂತ Mobile ನೋಡಿದೆ ಉಹೂಂ! ಮತ್ತೆ ನೆನಪಾಯಿತು ಹೀಗೆ ಸರಿಯಾದ ಸಮಯಕ್ಕೆ ಮೆಸೆಜ್ ಬರುವುದು ನಿಂತು ಕೆಲ ತಿಂಗಳೇ ಕಳಿದಿವೆಯಲ್ಲಾ...ಮತ್ತೇಕೆ ಕಾಯುತ್ತಿದ್ದೇನೆ!. ಬಹುಶಃ ಇತ್ತೀಚೆಗೆ ಕೆಲಸ ಜಾಸ್ತಿ ಇದ್ದಿರಬಹುದು ಎಂದು ನನ್ನನೇ ಸಮಾಧಾನಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಮನಸ್ಸು ಒಪ್ಪಲಿಲ್ಲ. Facebook Chat ಓಪನ್ ಮಾಡಿ ಅವಳ Status ನೋಡಿದೆ 'Online' ಅಂತ ಇತ್ತು ! ದುಃಖ ತಡೆಯಲಾಗಲಿಲ್ಲ. ಕೊನೇ ಕೊಂಡಿ ಇಂದೇ ಕಳಚಬಾರದೇ ಎನಿಸಿತು.


                                                                                                                            ಕೆ. ನಾ. ಗೋರೆ