ನೇರ ಪರಿಚಯವಿಲ್ಲದ ಪ್ರಕಾಶಣ್ಣ 'ಇಟ್ಟಿಗೆ ಸಿಮೆಂಟ್'ನ ಮೂಲಕ ಕಥೆಗೆ ಅಡಿಪಾಯ ಹಾಕಿದ್ದರೆ http://ittigecement.blogspot.in/2014/04/blog-post.html ನನ್ನ ನೆಚ್ಚಿನ ಕಥೆಗಾರ ದಿನಕರ ಮೊಗೇರ ರವರು ಈ ಕಥೆಯನ್ನು http://dinakarmoger.blogspot.in/2014/04/blog-post_14.html 'ಮೂಕ ಮನದ ಮಾತು'ಗಳಲ್ಲಿ ಮುಂದುವರೆಸಿ ಅಂತ್ಯಕಾಣಿಸದೇ ನಮಗೊಂದು ಮುಕ್ತ ಅವಕಾಶ ನೀಡಿದ್ದಾರೆ. ಆ ಕಥೆಯನ್ನು 'ಮನದೊಳಗಣ ಮಾತಿನಮಂಚ'ದ ಮೂಲಕ ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದೇನೆ.
ಅವಸರ ಅವಸರದಲ್ಲಿ ಮನೆ ಬಾಗಿಲಿಗೆ ಬೀಗ ಹಾಕಿ ಗೇಟ್ವರೆಗೆ ತಲುಪುವಷ್ಟರಲ್ಲಿ ಹೋ... Purse ಮರೆತೇ ಹೋಯಿತಲ್ಲಾ... ಎಂದು ನೆನಪಾಯಿತು. ಹೌದು ಆತನ ಆಕರ್ಷಣೆ ಜಗತ್ತನ್ನೇ ಮರೆಸುವಂತಹದ್ದು. ಇನ್ನು Purse ಏನು ಮಹಾ ! ಎಂದು ಮನಸ್ಸಿನಲ್ಲೇ ನಾಚಿಕೆಯ ನಗು ಬಂತು. ಹೀಗೆ ಒಳ ಹೊಕ್ಕವಳೇ Purse ಗಾಗಿ ತಡಕಾಡಿದೆ. ಇತ್ತೀಚೆಗೆ ಮನೆಯಿಂದ ಹೊರ ಹೋಗದೇ ಕೆಲ ದಿನಗಳೇ ಸಂದಿದ್ದರಿಂದ Purse ಅಜ್ಞಾತವಾಗಿತ್ತು. ಆದರೂ ಕೊನೆಗೂ ಗಾಡ್ರೇಜ್ ಮೂಲೆಯೊಂದರಲ್ಲಿ ಸಿಕ್ಕಿದಾಗ ಅಬ್ಬಾ ಎನಿಸಿತು. ಇನ್ನು ತಡಮಾಡಬಾರದೆಂದು ಹೊರಡುವಷ್ಟರಲ್ಲಿ ಅದೇಕೋ ಲಿಪ್ಸ್ಟಿಕ್ ಮಾಸಿ ಹೋಗಿದೆಯಾ ಅಂತ ನೋಡುವ ಮನಸ್ಸಾಯಿತು. ಕನ್ನಡಿ ಮುಂದೆ ನಿಂತವಳಿಗೆ ಇನ್ನೊಂದು ಬಾಜಿನಲ್ಲಿ ಆತನೇ ನಿಂತು! 'ಎಲ್ಲಾ ಸರಿಯಾಗಿದೆ ಕಣೆ... ಬೇಗ ಬಾ...' ಎಂದಂತಾಯಿತು. 'ನಾನು ಮಾತು ಮತ್ತೆ ನಾಚಿಕೊಂಡಿದ್ದೆ'.ಕೂಡಲೇ ಮನೆಗೆ ಬೀಗ ಹಾಕಿ ಹತ್ತಿರದ ಬಸ್ ಸ್ಟ್ಯಾಂಡ್ಗೆ ತಲುಪಿದೆ. ಕೆಲವೇ ಕ್ಷಣಗಳಲ್ಲಿ ಬಸ್ಸು ಬರುವುದಿದ್ದರೂ 'ಹದಗೊಂಡ ಮನಸ್ಸು ಹಾಗೂ ದೇಹ ಕಾಯುವುದಕ್ಕೆ ಸಿದ್ಧವಿರಲಿಲ್ಲ. ಎಲ್ಲಾದರೂ ರಿಕ್ಷಾ ಕಾಣಿಸುತ್ತಿದೆಯೇ ಅಂತ ಕತ್ತು ಇಣುಕಿಸಿ ಅತ್ತ ಇತ್ತ ನೋಡಿದೆ. ಉಹೂಂ! ಹಾಳಾದ್ದು ಯಾವಾಗ್ಲೂ ಬೇಡಾ ಬೇಡ ಅಂದರೂ ರಿಕ್ಷಾದವರು ನಿಲ್ಲಿಸಿ ಬರ್ತಿರಾ ಮೇಡಂ, ಬಸ್ಸಿಗಿಂತ ಮುಂಚೆ ತಪುಪ್ತಿರಾ ಅಂತ ಮಸ್ಕಾ ಹೊಡೆಯುತ್ತಿದ್ದರು. ಇವತ್ತು ಎಲ್ಲಿ ಸತ್ತು ಹೋಗಿದ್ದಾರೋ ಎನಿಸಿತು. ಎಂದೂ ಸಿಟ್ಟು ಮಾಡಿಕೊಳ್ಳದವಳಿಗೆ ಇಂದೇಕೋ ಮನಸ್ಸು ನಿಯಂತ್ರಣ ಕಳೆದುಕೊಂಡಿತ್ತು. ಇರುವೆಗಳ ಸಾಲಿನ ಮೇಲೆ ಕಾಲಿಟ್ಟು ನಿಂತಂತಾಗಿತ್ತು ನನ್ನ ಸ್ಥಿತಿ. ಅಷ್ಟರಲ್ಲೇ ದೂರದಲ್ಲಿ ಬಸ್ಸು ಬರುವುದು ಕಾಣಿಸಿತು. ಅಯ್ಯೋ ಬೇಗ ಬಾರಪ್ಪ ಅಂತ ಮನಸ್ಸಿನಲ್ಲೇ ಗೊಣಗಿದೆ. ಬಸ್ಸು ಬಸ್ಸ್ಟ್ಯಾಂಡಿಗೆ ತಲುಪಿದ್ದೇ ತಡ ಪೂರ್ತಿಯಾಗಿ ನಿಲ್ಲುವ ಮುಂಚೆಯೇ ಗಂಡಸರಂತೆ ಹಾರಿ ಹತ್ತಿ ಕುಳಿತಿದ್ದೆ. ಯಾರು ನೋಡಿ ನಕ್ಕರೋ ದೇವರೇ ಬಲ್ಲ.ಏನು ಕಾಕತಾಳಿಯವೋ... ಅಂದು ನಾನು ಮತ್ತು ಅವನು ಕುಳಿತ ಅದೇ ಎಡಬದಿಯ ಮೂರನೇ ಸೀಟಿನಲ್ಲಿ ಕುಳಿತಿದ್ದೆ. ನೆನಪುಗಳು ಮತ್ತೆ ಮತ್ತೆ ಮೇಲೇರಿ ಬರತೊಡಗಿದವು. ಅವನು ನನ್ನ ಬಳಿಯಲ್ಲೇ ಇದ್ದಾನೇನೋ... ಅದೇ ದಿನ ಮತ್ತೆ ಮರಳಿ ಬಂದಿದೆಯೇನೋ ಅನಿಸುತ್ತಿತ್ತು. ವಾಸ್ತವವಾಗಿ ಪಕ್ಕದ ಸೀಟು ಖಾಲಿ ಇದ್ದರೂ ಬಸ್ಸು ತಿರುವು ಮುರುವುಗಳಲ್ಲಿ ಸಾಗುತ್ತಿರಲು ಅಂದಿನಂತೆಯೇ 'ಅವನ ಬೆಚ್ಚಗಿನ ಮೈ ಸೋಕಿ ಕೊಂಚ ಕೊಂಚವೇ ನಾಚಿ ಕರಗಿ ಹೋಗುತ್ತಿದ್ದೇನೋ' ಎನಿಸುತ್ತಿತ್ತು. ನಾನು ನನ್ನಷ್ಟಕ್ಕೆ ನಾಚಿಕೊಳ್ಳುವುದನ್ನು ನೋಡಿ ಟಿಕೇಟ್ ಪಡೆಯಲು ಬಂದ ಕಂಡಕ್ಟರ್ ವಿಚಿತ್ರ ಕಾಮುಖ ದೃಷ್ಟಿಯಲ್ಲಿ ನೋಡುತ್ತಿದ್ದ. ಆದರೂ ಕಡೇ ಪಕ್ಷ ಮರಳಿ ದುರುಗುಟ್ಟಿ ನೋಡುವ ಮನಸ್ಸೂ ಆಗಲಿಲ್ಲ. ಬಹುಷಃ ನಾನು ಆ ರಸಮಯ ಇತಿಹಾಸದಿಂದ ಹೊರಬರಲು ಬಯಸುತ್ತಿರಲಿಲ್ಲವೇನೋ...!ನಾನು ನನ್ನದೇ ಕಲ್ಪನಾ ಲೋಕದಲ್ಲಿ ಅವನ ಬೆಚ್ಚನೆಯ ಭುಜದ ಮೇಲೆ ತಲೆಯಿರಿಸಿ ನಾಚಿಕೊಂಡಿದ್ದೆ. ಅಷ್ಟರಲ್ಲೇ ತೂರಿಬಂದ ಬಸ್ನ ಕರ್ಕಶ ಹಾರ್ನ್ ನಿದ್ದೆಯಿಂದ ಎಬ್ಬಿಸಿದಂತಾಯಿತು. ಕೈಯಲ್ಲಿ ಹಿಡಿದಿದ್ದ ಮೊಬೈಲ್ ಕೈ ಜಾರಿ ಕೆಳಗೆ ಬಿದ್ದಿತ್ತು. ಕೂಡಲೇ ಅದನ್ನು ಎತ್ತಿಕೊಂಡವಳಿಗೆ ಮೊಬೈಲ್ ಸ್ಕ್ರೀನ್ ಸೇವರ್ನಲ್ಲಿದ್ದ ಗಂಡನ ನಗು ಮೊಗ ಬೆಚ್ಚಿ ಬಿಳಿಸಿತ್ತು. 'ಚಳಿಗಾಲದ ಆ ತಂಪು ಗಾಳಿಯಲ್ಲೂ ಮೈ ಬೆವರತೊಡಗಿತು'. ಅಯ್ಯೋ... ಶಿವನೇ...! ನನಗೇನು ಬಂತು ಹುಚ್ಚು! ಅಂದು ಮದುವೆಗಿಂತ ಮುಂಚೆ ಆ ಗೆಳೆಯ ಮತ್ತು ನಾನು ಒಂದೇ ರೂಮಿನಲ್ಲಿ ರಾತ್ರಿ ಪೂರ್ತಿ ಕಳೆದಿದ್ದೆವು. ಆದರೂ ಅಂದು ಆತನಲ್ಲಿ ಸಂಪೂರ್ಣವಾಗಿ ಲೀನಳಾಗುವ ಮುಕ್ತ ಅವಕಾಶವಿದ್ದರೂ 'ಮೈ ಮನಸ್ಸು ದೂರದಲ್ಲಿರಿಸಿಕೊಂಡಿದ್ದೆ'. ಒಂದು ವೇಳೆ ಅಂದು ಬೇಲಿ ದಾಟಿದ್ದರೂ ಕೂಡಾ... ಬಾಳೇನು ಹಾಳಾಗುತ್ತಿರಲಿಲ್ಲ. ಹೌದು. ಖಂಡಿತ... ಆತ ಎಂದಿಗೂ ನನ್ನ ಕೈ ಬಿಡದೇ ಹೂವಿನಂತೆ ನೋಡಿಕೊಳ್ಳುತ್ತಿದ್ದ. ಅಷ್ಟು ನಂಬಿಕಸ್ತ ಸ್ನೇಹ ಜೀವಿ ಆತ. ಅದೆಲ್ಲವೂ ಗೊತ್ತಿದ್ದೂ ಕೂಡಾ ನನ್ನ ಮೈ ಮನಸ್ಸುಗಳು ನನ್ನ ಸುಪ್ಪತ್ತಿಗೆಯಲ್ಲೇ ಇರಿಸಿಕೊಂಡಿದ್ದೆ. ಅವನೂ ಕೂಡಾ! ಆದರೆ ಇಂದು! ನಾನೊಬ್ಬ ಗೃಹಿಣಿ. ಪ್ರೀತಿಯಿಂದ ನೋಡಿಕೊಳ್ಳುವ ಪತಿ ಇರುವಾಗ ನಾನು ಇತಿಹಾಸದ ಅವನ ಪ್ರೀತಿಗೆ, ಬಿಸಿ ಮೈಗೆ ಕರಗಿಹೋದೆನಾ...!ಛೇ... ನನ್ನ ಬಗ್ಗೆ ನನಗೇ ಮುಜುಗರವೆನಿಸಿತು. ಕೂಡಲೇ ಬಸ್ ನಿಲ್ಲಿಸುವಂತೆ ಕಂಡೆಕ್ಟರ್ ಗೆ ಸಂಜ್ಞೆ ಮಾಡಿದೆ. ಬಸ್ಸು ವೇಗ ಕಡಿಮೆಗೊಳಿಸುತ್ತಿದ್ದಂತೆ ಗಂಡಸರಂತೆ ಅವಸರ ಅವಸರದಲ್ಲಿ ಬಸ್ ಇಳಿದೆ. ನಾಚಿಕೆಯಿಂದ ಕಂಗೊಳಿಸುತ್ತಿದ್ದ ನನ್ನ ಮುಖ ಆತಂಕದಿಂದ ಮುದುಡಿ ಹೋಗಿತ್ತು. ಬಸ್ನಿಂದ ಇಳಿದವಳಿಗೆ ಏನು ಮಾಡಬೇಕು ಎಂದೇ ತೋಚಲಿಲ್ಲ...ಮೆದುಳು ಯಾವ ಸಂದೇಶವನ್ನೂ ನೀಡುತ್ತಿರಲಿಲ್ಲ. ಒಂದೆರಡು ನಿಮಿಷ ಅಲ್ಲೇ ನಿಂತು ಎನನ್ನೋ ಯೋಚಿಸತೊಡಗಿದೆ. ಅದಾಗಲೇ ಅವನ ಮಿಸ್ ಕಾಲ್ ಬಂದಿತ್ತು...! ನಿನ್ನೆಯಷ್ಟೇ ಹಳೇಯ ಫೋಟೊಗಳನ್ನು ತಡಕಾಡಿ ಅವನ ಒಂದು ಸುಂದರ ಫೂಟೊವನ್ನು ಅವನ ಮೊಬೈಲ್ ನಂಬರ್ ಜೊತೆ ಸೇರಿಸಿದ್ದೆ. ಅದು ಇಂದು ಮೊಬೈಲ್ ಸ್ಕ್ರೀನ್ನಲ್ಲಿ ಎದ್ದು ಕಾಣುತ್ತಿತ್ತು. ಅವನ ಫೂಟೋ ನೋಡಿದವಳಿಗೆ ಎಲ್ಲವೂ ಗೊತ್ತಿದ್ದರೂ ಅವನ ಆಕರ್ಷಣೆ ಮತ್ತೆ ಅವನೆಡೆಗೆ ಬಂಧಿಯಾಗಿಸಿ ಬಿಟ್ಟಿತ್ತು.ನಿನ್ನ ನಾಚುವ ಮುಖ ನೋಡಿ ತುಂಬಾ ದಿನಗಳಾಗಿವೆ ಎನ್ನುವ ಅವನ ಮಾತು ಮತ್ತೆ ಬಸ್ ಹತ್ತುವಂತೆ ಮಾಡಿತು.
ಕೆ. ನಾ. ಗೋರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ