ಮನದ ಮಾತುಗಳು, ತೋಚಿದ್ದನ್ನು ಗೀಚಿದಾಗ ಮೂಡಿದ ಲೇಖನಗಳು, ಪುಟ್ಟ ಕವನಗಳು, ಕ್ಲಿಕ್ಕಿಸಿದ ಭಾವಚಿತ್ರಗಳು...
ಬುಧವಾರ, ಡಿಸೆಂಬರ್ 4, 2013
ದ್ವಂದ್ವ... ಮತ್ತದೇ ದ್ವಂದ್ವ ! ಭಾಗ-1
(ಗೂಗಲ್ ಚಿತ್ರ )
ಹಿನ್ನಲೆ: ನನ್ನಂತೆಯೇ ನನ್ನ ಬದುಕೂ ವಿಚಿತ್ರವಾಗಿತ್ತು! ಕೆಲವರಿಗದು ಅರ್ಧಪೂರ್ಣವೆನಿಸಿದರೆ ಮತ್ತೆ ಹಲವರಿಗೆ ಅದು ನಿರರ್ಥಕವೆನಿಸುತ್ತಿತ್ತು. ಭಾರತೀಯತೆಯ ಪ್ರತೀಕವಾದ ನಾವ್ಯಾರೂ ನಮಗಾಗಿ ಬದುಕುವುದಿಲ್ಲ. ನಮ್ಮ ಬಹುಪಾಲು ಕೆಲಸಗಳು ಇತರರ ಪ್ರೇರೇಪಣೆಗೆ ಒಳಗಾಗಿರುತ್ತವೆ ! ಸಂಶಯವಿದ್ದಲ್ಲಿ ನಿಮ್ಮಲ್ಲೇ ಆತ್ಮವಿಮಶರ್ೆ ಮಾಡಿಕೊಳ್ಳಿ.ಒಂದು ಸಣ್ಣ ಉದಾಹರಣೆ ಹೇಳುವುದಾದರೆ ಕೆಲವು ಮನೆಗಳಲ್ಲಿ ಮುಖ್ಯವಾಗಿ ಹೆಂಗಸರು!(ಅಪವಾದಗಳ ಹೊರತಾಗಿ) ತಮ್ಮ ಮಗ ಬೆಂಗಳೂರಿನಲ್ಲಿ ದೊಡ್ಡ ಕಂಪನಿಯಲ್ಲಿ ದುಡಿಯುತ್ತಿದ್ದಾನೆ ಎಂದು ಊರೆಲ್ಲಾ ಹೇಳಿಕೊಂಡು ಬರುತ್ತಾರೆ. ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲಾ! ಆದರೆ ಅವರ ಮನಸ್ಸು ಅಲ್ಲಿಗೆ ಸಮಾಧಾನಗೊಳ್ಳುವುದಿಲ್ಲ ಇತರರ ಮಕ್ಕಳನ್ನು ನಮ್ಮ ಮಕ್ಕಳೊಡನೆ ತಕ್ಕಡಿಯಲ್ಲಿ ತೂಗುವ ಕೆಲಸ ಮಾಡುತ್ತಾರೆ. ಅಷ್ಟಕ್ಕೂ ಹೀಯಾಳಿಸುವ ಅವಕಾಶ ಸಿಕ್ಕರಂತೂ ಅದರ ಭರಪೂರ ಲಾಭ ಪಡೆಯುವಲ್ಲಿ ಕೆಲ ಹೆಂಗಸರದ್ದು ಎತ್ತಿದ ಕೈ. ಸೀರಿಯಲ್ಗಳ ಪ್ರಭಾವವೂ ಅದಕ್ಕೆ ಒಂದು ಮುಖ್ಯ ಕಾರಣ ಎಂಬುದನ್ನು ಸ್ಪಷ್ಟವಾಗಿ ಹೇಳಬಲ್ಲೆ. ವಾಸ್ತವವಾಗಿ ಅಂತಹ ಪಟ್ಟಣಗಳಲ್ಲಿ ದುಡಿಯುವ ಮಕ್ಕಳು ಪಡುವ ಕಷ್ಟ ಕಂಡರೆ ಖಂಡಿತ ಅದೊಂದು ಪಂಜರದ ಬದುಕು. ಹಾಗಂತ ಊರಿಗೆ ಬಂದು ಸ್ವಚ್ಛಂದವಾಗಿ ಬದುಕೋಣವೆಂದರೆ ದೊಡ್ಡಸ್ತಿಕೆ ಎಂಬ ಭೂತದಲ್ಲಿ ಲೀನರಾಗಿ ಒದ್ದಾಡುತ್ತಿರುವಾಗ ಆ ಭೂತ ಬಿಟ್ಟಿತೇ! ಅಂತಹವರಿಗೆ ಸಮಾಜದ ದೃಷ್ಟಿಯಲ್ಲಿ ಘನ್ಯ ಸ್ಥಾನ. ಆದರೆ ಇಂತಹ ತೋರ್ಪಡಿಸಿಕೊಳ್ಳುವಿಕೆ ಇಷ್ಟಪಡದ ನನ್ನಂತಹ ಕೆಲವರಿರುತ್ತಾರೆ. ಆದಷ್ಟು ಇನ್ನೊಬ್ಬರಿಗಾಗಿ ಬದುಕಬಾರದೆಂಬ ಭಾವದವರು. ಮೊಂಡು ಭಾವವೋ ತಿಳಿದಿಲ್ಲ! ಕೆಲವರ ಪ್ರಕಾರ ಇರಬಹುದೇನೋ! ಅತೀ ಬುದ್ಧಿವಂತರೆಲ್ಲಾ ನಮ್ಮನ್ನು ನೋಡಿ ಉದ್ಧಾರವಾಗುವ ಲಕ್ಷಣಗಳೇ ಇಲ್ಲದ ಸ್ವಭಾವ ಎಂದು ಕರೆಯುವುದು ಇದಕ್ಕೇ ಇರಬಹುದು. ವಿರಳರಲ್ಲಿ ಅತೀ ವಿರಳರಿಗೆ ಮಾತ್ರ ನಮ್ಮ ಬದುಕು ಅರ್ಧಪೂರ್ಣ ಗೋಚರಿಸುತ್ತದೆ. ಅಂತಹ ಅತೀ ವಿರಳ ವ್ಯಕ್ತಿ ನಾನೊಬ್ಬನೇ ಇರಬಹುದೇನೋ! ಆಶ್ಚರ್ಯಪಡಬೇಕಾದ್ದಿಲ್ಲ.ಮನೆಯಲ್ಲೇ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ, ಯಾರ ಹಂಗೂ ಇಲ್ಲದೇ ಜೀವ ಸಂಕುಲಗಳನ್ನು ಮನಸಾರೆ ಆನಂದಿಸುವ ಸ್ವಭಾವ ನನ್ನದು. ಹಳ್ಳಿಯ ಸೌಂದರ್ಯ, ಪ್ರಾಣಿ ಪಕ್ಷಿಗಳ ಜೀವನ ಶೈಲಿ ತಿಳಿಯುವುದೆಂದರೆ ಇಷ್ಟದ ಕೆಲಸ. ಅದೊಂದು ಸುಂದರ ಅನುಭವ ನೀಡುವ ಹವ್ಯಾಸವೂ ಹೌದು. ಇಲ್ಲಿ ಪ್ರಕೃತಿಯೇ ಶಿಕ್ಷಕ, ಯಾರ ಹಂಗೂ ಇಲ್ಲದೆ ಸ್ವಚ್ಛಂದವಾಗಿ ಬದುಕುವ ಇಂತಹ ಅವಕಾಶ ಹಳ್ಳಿಗಳಲ್ಲಿ ಅಲ್ಲದೇ ಬೇರೆಲ್ಲಿ ಸಿಗಲು ಸಾಧ್ಯ! ಫೋಟೊಗ್ರಫಿ ನನ್ನ ನೆಚ್ಚಿನ ಹವ್ಯಾಸ. ತಥಾ ಪ್ರಾಣಿ ಪಕ್ಷಿಗಳ ಫೋಟೊ ತೆಗೆಯುವುದೆಂದರೆ ಎಲ್ಲಿಲ್ಲದ ಆಸಕ್ತಿ. ಹಳ್ಳಿಗರಿಗೆ ಇಂತಹ ಹವ್ಯಾಸಗಳೆಲ್ಲವೂ ಕೆಲಸ ಇಲ್ಲದವರು ಮಾಡುವ ನಿರುಪಯುಕ್ತ ಕೆಲಸ. ಒಂದರ್ಥದಲ್ಲಿ ನಿರುಪಯುಕ್ತ ಎನಿಸುವುದರಲ್ಲಿ ಖಂಡಿತ ತಪ್ಪಿಲ್ಲ. ಯಾಕೆಂದರೆ ಅವರು ಅದೆಷ್ಟೋ ಸಮಯದಿಂದ ಆ ಪ್ರಾಣಿ ಪಕ್ಷಿಗಳನ್ನು ನೋಡುತ್ತಲೇ ಬದುಕಿದವರು ಹಾಗಾಗಿ ಆ ಬಗೆಗೆ ಸಹಜ ತಾತ್ಸಾರ. ಅದಕ್ಕೇ ನನ್ನನ್ನು ಕಂಡವರೆಲ್ಲಾ ಇವನಿಗೆ ಬೇರೆ ಕೆಲಸವಿಲ್ಲ ಎಂದು ಹೀಯಾಳಿಸುತ್ತಿದ್ದರೋ ಏನೋ! ಅದೆಲ್ಲವೂ ನನ್ನ ಕಿವಿಗಳಿಗೆ ಬಿದ್ದರೂ ನನ್ನ ಕರ್ಣಪಟಲಗಳ ವರೆಗೆ ತಲುಪುತ್ತಲೇ ಇರಲಿಲ್ಲ. ನನ್ನ ಹವ್ಯಾಸ ಬಗ್ಗೆ ನನಗೆ ಸರಿಯಾದ ಅರಿವಿದ್ದ ಕಾರಣ ಯಾವ ಮಾತುಗಳೂ ನನ್ನನ್ನು ವಿಚಲಿತನಾಗಿಸುತ್ತಿರಲಿಲ್ಲ. ಅದೆಲ್ಲಾ ಬಿಡಿ...ಇಲ್ಲಿ ನಾನು ಹೇಳಬೇಕಾದದ್ದು ಬೇರೆಯೇ ಇದೆ, ದ್ವಂದ್ವ ಎಂಬ ಶೀಷರ್ಿಕೆಯಡಿ ವಾಸ್ತವ ಕಲ್ಪನೆಗಳನ್ನು ಕಥಾ ರೂಪದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.
ಈ ಹುಚ್ಚು ಬರಹದಲ್ಲಿ ಎಲ್ಲಾದರೂ ಹುರುಳು ಹುಡುಕುವ ಮನಸ್ಸಿದ್ದರೆ ಜೈ ಎಂದು ಓದು ಮುಂದುವರೆಸಿ, ತಪ್ಪಿದ್ದಲ್ಲಿ ತಿಳಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ